ನವೆಂಬರ್ 29, 2016

ಪ್ರಾಯಶಃ ನೀವು ನೋಡಿರದ, ಆದರೆ ನೋಡಲೇಬೇಕಾದ 10 ಕನ್ನಡ ಚಿತ್ರಗಳು


ಬೆಳಿಗ್ಗೆ ಎದ್ದು ಸ್ನಾನ ಮಾಡಿ, ಅರ್ಜೆಂಟ್ ಅರ್ಜೆಂಟಲ್ಲಿ ರೆಡಿ ಆಗಿ, ಐಡಿ ಕಾರ್ಡ್ ಕೊರಳಿಗೇರಿಸಿ, ಕ್ಯಾಬ್ ಹತ್ತಿ, ಒಂದು ಗಂಟೆ ನಿದ್ದೆ ಮಾಡಿದರೆ, ಆಫೀಸ್ ಪ್ರತ್ಯಕ್ಷ. ಸಂಜೆವರೆಗೆ ಕಂಪ್ಯೂಟರ್ ಜೊತೆ ಗುದ್ದಾಡಿ ಹ್ಯಾಗೋ output ತರಿಸಿದರೆ ಟೀಮ್ ಲೀಡ್ ಗೆ ವಿದಾಯ ಹೇಳಿ ನೆಮ್ಮದಿಯಿಂದ ಮನೆ ತಲುಪಬಹುದು. ಮನೆ ತಲುಪಿ, ಶಿವಾ ಅಂತ ಟಿವಿ ಹಾಕಿದರೆ ಅದೇ ಪುಟ್ಟಗೌರಿ ಮದುವೆ, ಅಗ್ನಿ ಸಾಕ್ಷಿ; ನ್ಯೂಸ್ ಚಾನಲ್ ಗಳಲ್ಲಿ ತೋರಿಸುವ ಕಾಮಿಡಿ ಸುದ್ದಿಗಳನ್ನು ನೋಡದಿರುವುದೇ ಒಳಿತು. ಚಿತ್ರಮಂದಿರಕ್ಕೆ ಹೋಗೋಣ ಅಂದರೆ ವಾರ ಯಾವುದೂ ಒಳ್ಳೆಯ ಚಿತ್ರ ಬಿಡುಗಡೆಯಾಗಿಲ್ಲ. ಟೈಮ್ ಪಾಸಿಗೆ ಏನು ಮಾಡೋದಪ್ಪಾ ಅಂತ ಯೋಚಿಸಿ, ಯೋಚಿಸಿ, ಏನೂ ತೋಚದೇ, ಕೊನೆಗೆ ಗುಬುರಾಕ್ಕೊಂಡು ಅವಳ / ಅವನ ನೆನಪಲ್ಲಿ ಮಲಗಿದ ರಾತ್ರಿಗಳೆಷ್ಟೋ?! ಗಜಿಬಿಜಿ ಐಟಿ ಬದುಕು, ವಾರಾಂತ್ಯ ಬಂದರೆ ಊರು ಇಲ್ಲವೇ ಅವಳಬೆಟ್ಟ ಹೋಗಬಹುದು, ಕಡೆ ಭಾನುವಾರ ಅಲ್ಲ, ಕಡೆ ಶನಿವಾರ ಅಲ್ಲದ midweek ಅಲ್ಲಿ ಏನು ಮಾಡೋದು ಅಂತ ತಿಳಿಯದೆ ಒಮ್ಮೊಮ್ಮೆ ತೀರಾ ಒಂಟಿ ಎನಿಸಬಹುದು. ಯಾರಿಗೆ ರೀತಿ ಆಗಿರಲ್ಲ ಹೇಳಿ? ನನಗೂ ಮೊನ್ನೆ ರೀತಿ ಬೇಜಾರಾಗಿ, ಏನೂ ಬೇಡ ಶಿವಾ ಅಂತ ಮ್ಯಾಗಿ ಮಾಡ್ಕೊಂಡು ಊಟ (?) ಮಾಡುತ್ತಿದ್ದಾಗ ಒಂದು ಸಂದೇಶ ಬಂದಿತು.
ಕಡ್ಡಿಪುಡಿ ಹೆಸರು ಕೇಳಿ, ಅಯ್ಯಯ್ಯಾ, ಏನ್ ಏನ್ ಹೆಸರು ಇಡ್ತಾರಪ್ಪಾ ಅಂತ ಬಹಳ ದಿನಗಳವರೆಗೆ ಚಿತ್ರ ನೋಡಿರಲಿಲ್ಲ. ಆದರೆ ಮೊನ್ನೆ ನಿನ್ನಹೆಸರಲ್ಲೇನಿದೆ ಸ್ವಾಮಿ?’ ಅಂಕಣ ಓದಿದ ಮೇಲೆ ಒಂದು ಕೈ ನೋಡೇ ಬಿಡೋಣ ಅಂತ ಚಿತ್ರ ಪ್ಲೇ ಮಾಡಿದೆ. Ooo my God, ಏನು ಫಿಲಂ ಗುರೂ, ವ್ಹಾ ವ್ಹಾ, ಶಿವಣ್ಣ ಸೂಪರ್ ಬಿಡಮ್ಮ
ಅಂತ ನಮ್ ರಾಮ್ ಮೆಸೇಜ್ ಮಾಡಿದ್ದ. ಮೊದಲೇ ಕಡ್ಡಿಪುಡಿ ಚಿತ್ರದ ಫ್ಯಾನ್ ಆಗಿದ್ದ ನನಗೆ ಸಂದೇಶ ನೋಡಿ ಸ್ವರ್ಗ ಒಂದು ಸೆಕೆಂಡ್ ರಪ್ಪ್ ಅಂತ ಪಾಸ್ ಆದ ಹಾಗಾಯ್ತು. ಇನ್ನೊಂದಿನ Sherlock ಟಿವಿ ಸರಣಿ ನೋಡಿದ ಮೇಲೆ ನಮ್ ಭಾಯ್-ಗೆ ಇದೇ ರೀತಿ ನಾನು ಮೆಸೇಜ್ ಮಾಡಿದ್ದೆ. ಆಗಿನ ಕಾಲದ barter system ಥರ, ನಮ್ ಹುಡುಗರ ನಡುವೆ ರೀತಿ ಸಿನಿಮಾ, ಧಾರವಾಹಿ, ಹೊಸ ಹಾಡುಗಳು, ದಾರಿ ತಪ್ಪಿಸುವ ವೀಡಿಯೋಗಳ sharing ಆಗಾಗ ನೆಡೆಯುತ್ತಲೇ ಇರುತ್ತದೆ. ಬ್ಯಾಂಕಲ್ಲಿ ದಿನಕ್ಕೆ ಒಂದು ಸಲವಾದರೂಚಿಲ್ಲರೆ ಕೊಡಿ ಸಾರುಅಂತ ನಾನು ಕೇಳುವ ಹಾಗೆ ನಮ್ ಐಟಿ ಗೆಳೆಯರು sharing is caring ಮಾತನ್ನು ಕೇಳಿರುತ್ತಾರೆ ಎಂಬುದು ಸತ್ಯ. ಇದೇ ವಿಷಯವಾಗಿ ಯೋಚಿಸುತ್ತಾ ಇರುವಾಗ, ಯಾಕೆ ಬಹಳ ಕಮ್ಮಿ ಜನಕ್ಕೆ ಗೊತ್ತಿರುವ ಕನ್ನಡ ಚಿತ್ರಗಳ ಕುರಿತು ಒಂದು ಅಂಕಣ ಬರೆಯಬಾರದು ಅನಿಸಿತು. After all, sharing is caring ಅಲ್ಲವೇ? ಅದರ ಫಲವೇ ಪ್ರಯತ್ನ.


1. ದಿನಗಳು
ತಾರಾಗಣ: ಚೇತನ್ ಕುಮಾರ್, ಅರ್ಚನಾ, ಆಶೀಶ್ ವಿದ್ಯಾರ್ಥಿ, ಶರತ್ ಲೋಹಿತಾಶ್ವ ಮತ್ತು ಅಚ್ಯುತ್ ಕುಮಾರ್



ಉಪೇಂದ್ರ ನಿರ್ದೇಶನದ ಓಂ ಚಿತ್ರ ಹಿಟ್ ಆಗಿದ್ದೇ ಆಗಿದ್ದು, ಸಾಲು ಸಾಲು ರೌಡಿಸಂ ಕಥಾ ಹಂದರವುಳ್ಳ ಚಿತ್ರಗಳು ಬರಲು ಶುರುವಾದವು. ಆದರೆ ರೌಡಿಸಂ ವಿಷಯವನ್ನಾಧರಿಸಿದರೂ, ಹೆಚ್ಚಿನ ಕ್ರೌರ್ಯವಿಲ್ಲದೇ ಒಂದು ಪ್ರೇಮ ಕಥೆಯನ್ನು ಹಾಗೂ ಜೈರಾಜ್ ಮತ್ತು ಕೊತ್ವಾಲ್ ನಡುವಿನ ಸಮರವನ್ನು ತುಂಬಾ ಅಚ್ಚುಕಟ್ಟಾಗಿ ತೋರಿಸಿರುವ ಚಿತ್ರ ' ದಿನಗಳು'. ಅಗ್ನಿ ಶ್ರೀಧರ್ ಅವರ ದಾದಾಗಿರಿಯ ದಿನಗಳು ಪುಸ್ತಕವನ್ನು ಆಧರಿಸಿದ ಕೆ. ಎಂ. ಚೈತನ್ಯ ಅವರ ಚಿತ್ರ ಒಂದು ಒಳ್ಳೆಯ ಮನೆ ಊಟ ಮಾಡಿದಾಗ ತೃಪ್ತಿ ಆಗುತ್ತದೆಯಲ್ಲಾ, ಅಂಥದೇ ಒಂದು ತೃಪ್ತ ಕಿಕ್ ನೀಡುವಲ್ಲಿ ಯಶಸ್ವಿಯಾಗುತ್ತದೆ. ಗಜಿಬಿಜಿ ಬೆಂಗಳೂರು ಬೇಸರ ತರಿಸಿದ್ದರೆ ಕಾಲದ ವಿಂಟೇಜ್ ಬೆಂಗಳೂರು ನಿಮ್ಮ ಮನಸ್ಸಿಗೆ ಮುದ ನೀಡುತ್ತದೆ. ಸಂಭಾಷಣೆ ಮತ್ತು ಇಳಯರಾಜ ಅವರ ಸಂಗೀತ ನೆನಪಿನಲ್ಲುಳಿಯುತ್ತದೆ.

2. ಏಕಾಂಗಿ
ತಾರಾಗಣ: ವಿ ರವಿಚಂದ್ರನ್, ರಮ್ಯಕೃಷ್ಣ ಮತ್ತು ಪ್ರಕಾಶ್ ರೈ



ಮನುಷ್ಯ ಸಂಘ ಜೀವಿ, ಆದ್ದರಿಂದಲೇ ಸಾಮಾಜಿಕ ಜಾಲತಾಣಗಳಾದ facebook, WhatsApp, twitter, snapchat ಮಟ್ಟಿಗೆ ಹೆಸರುವಾಸಿಯಾಗಿರುವುದು. ಈಗೀಗ ಅಂತೂ ಊಟಕ್ಕೆ ಮುಂಚೆಓಂ ಸಹನಾಭವತೂಎಂದು ಪ್ರಾರ್ಥನೆ ಮಾಡುತ್ತೇವೋ ಇಲ್ಲವೋ ಗೊತ್ತಿಲ್ಲ, ಆದರೆ ಥಟ್ ಅಂತ ಫೋಟೋ ತೆಗೆದು, ಫಟ್ ಅಂತ Instagram ಗೆ upload ಮಾಡುವುದರಲ್ಲಿ ಅದೇನೋ ಖುಷಿ ನಮಗೆ. ಇಂತಹ ಸಾಮಾನ್ಯ ಅಭಿರುಚಿಗಳ ವಿರುದ್ಧವಾಗಿ ಒಬ್ಬ ವ್ಯಕ್ತಿ ತನ್ನ ಮಗನನ್ನು ಯಾಕೆ ಬೆಳೆಸುತ್ತಾನೆ? ಏಕಾಂಗಿಯಾಗಿ ಬೆಳೆದ ಹುಡುಗನ ಮುಂದಿರುವ ಸವಾಲುಗಳೇನು? ಅವನ ಜೀವನದಲ್ಲಿ ಒಂದು ಹೆಣ್ಣಿನ ಆಗಮನದಿಂದ ಏನೇನಾಗುತ್ತದೆ ಎಂಬ ಹೊಸ ವಿಷಯವನ್ನು ರವಿಮಾಮ ಇಲ್ಲಿ ಹೇಳಿದ್ದಾರೆ. ರವಿಚಂದ್ರನ್ ಅಂದರೆ ಪ್ರೇಮಲೋಕ, ರಣಧೀರ ಅಂತ ಗಾಜು ಪುಡಿ ಮಾಡುತ್ತಾ, ನಾಯಕಿಯರ ಹೊಟ್ಟೆಯ ಮೇಲೆ ಹಣ್ಣು ಉದುರಿಸುವ ಪೋಲಿ ಎಂದೇ ಭಾವಿಸಿದ ಹಲವರಿಗೆ ಚಿತ್ರ ಶಾಕ್ ಕೊಟ್ಟಿದ್ದು ಸುಳ್ಳಲ್ಲ. ಮೊದಲ ನೋಟಕ್ಕೆ ಇದೂ ಒಂದು ಫಿಲಂ ? ಯಪ್ಪಾ! ಎಂದುಕೊಂಡರೂ ಮತ್ತೆ ನೋಡಿದಾಗ ಸಮಾಜದ ಕರಾಳ ಮುಖ ದರ್ಶನವಾಗುವುದರ ಜೊತೆ ಹಲವು ವೇದಾಂತಿಕ ಬಿಟ್-ಗಳು ಅರ್ಥವಾಗುತ್ತವೆ. ರವಿಚಂದ್ರನ್ ಒಬ್ಬ ಅತ್ಯುತ್ತಮ ನಿರ್ದೇಶಕ ಕೂಡ ಎಂದು ಸಾಬೀತುಪಡಿಸಲು ಇದೊಂದು ಚಿತ್ರ ಸಾಕು.

3. ಗೋಧಿ ಬಣ್ಣ ಸಾಧಾರಣ ಮೈಕಟ್ಟು
ತಾರಾಗಣ: ಅನಂತ್ ನಾಗ್, ರಕ್ಷಿತ್ ಶೆಟ್ಟಿ, ಶೃತಿ ಹರಿಹರನ್, ಅಚ್ಯುತ್ ಕುಮಾರ್ ಮತ್ತು ವಸಿಷ್ಠ ಸಿಂಹ

ಅರೇ, ಫಿಲಂ ವರ್ಷ ತಾನೇ ಬಿಡುಗಡೆಯಾಗಿದ್ದು ಅಲ್ವಾ, ಸೂಪರ್ ಹಿಟ್ ಅಂತ ಘೋಷಣೆ ಆಗಿ ಟಿವಿಯಲ್ಲಿ ಕೂಡ ಪ್ರಸಾರ ಆಯಿತು. ಅಂತಹ ಒಳ್ಳೆಯ ಹಿಟ್ ಚಿತ್ರ ದಾರಿ ತಪ್ಪಿದ ಮಗ ಚಿತ್ರದ ಅಣ್ಣಾವ್ರು ಥರ ಇಲ್ಲಿ ಯಾಕೆ ಬಂತು ಅಂತ ಯೋಚಿಸಬೇಡಿ. ಗೋಬಸಾಮೈ ಹಿಟ್ ಚಿತ್ರ ನಿಜ, ಒಪ್ಪಿಕೊಳ್ತೀನಿ, ಆದರೆ ಇದು ಮೆಟ್ರೋ ಹಿಟ್ ಚಿತ್ರ. ಬಿ ಮತ್ತು ಸಿ ಸೆಂಟರ್ ಗಳ ಪ್ರೇಕ್ಷಕರಿಗೆ ಪ್ರಾಯಶಃ ಇಂತಹ ಚಿತ್ರ ಬಂದಿತ್ತು ಅಂತ ಗೊತ್ತಾಗಿದ್ದೇ ಟಿವಿಯಲ್ಲಿ ನೋಡಿದಾಗ. ಯಾಕೆಂದರೆ ನಾನು ಕೆಲಸ ಮಾಡುವ ಉಳವಿ ಎಂಬ ಚಿಕ್ಕ ಹಳ್ಳಿಯ ಶಾಲೆ ಹುಡುಗನೊಬ್ಬನಿಗೆ ಸಲ್ಲು ಅಭಿನಯದ ಸುಲ್ತಾನ್ ಚಿತ್ರ ಗೊತ್ತು, ಆದರೆ ಗೋಬಸಾಮೈ ಗೊತ್ತಿಲ್ಲ. Coming to topic, ಶ್ರೀಕೃಷ್ಣ ತನ್ನ ವಿಶ್ವ ರೂಪ ತೋರಿಸಿದಾಗ ಹಲವು ವಿಷಯಗಳು ಅರ್ಥವಾದರೂ ಏನನ್ನೂ ವಿವರಿಸಲಾಗದ ಒಂದು ಭಾವುಕ ಮೌನಕ್ಕೆ ಅರ್ಜುನ ಒಳಗಾಗುತ್ತಾನಲ್ಲಾ, ಗೋಬಸಾಮೈ ಚಿತ್ರದ ಅನಂತಣ್ಣ ಅವರ ಸಹಜ ಅಭಿನಯ ನೋಡಿದರೆ ಇದೇ ಬಗೆಯ ಮೌನ ನಿಮ್ಮನ್ನು ಆವರಿಸುತ್ತದೆ. In fact, ಇದನ್ನು ಅಭಿನಯ ಅನ್ನೋದೇ ತಪ್ಪೇನೋ, ಯಾರೋ ವೆಂಕೋಬ್ ರಾವ್ ಎಂಬಾತನ ಜೀವನವನ್ನು ನಾವು ನೋಡ್ತಾ ಇದ್ದೀವಿ, Coincidentally ಅವರೂ ಕೂಡ ನೋಡಲು ಅನಂತ್ ನಾಗ್ ಅವರ ಥರ ಇದ್ದಾರೆ ಅಷ್ಟೇ ಅಂದುಕೊಳ್ಳುವುದು ಒಳಿತು ಎಂದರೆ ಅತಿಶಯೋಕ್ತಿಯಾಗಲಾರದು. 60+ ವರ್ಷದ ಒಬ್ಬ Alzheimer's ರೋಗಿ ಕಳೆದು ಹೋಗುತ್ತಾನೆ. ದಿನಕ್ಕೆ 24 ಗಂಟೆ ಕೂಡ ಸಾಲದು ಎಂಬಂತೆ ಓಡಾಡುವ ಅವರ ಮಗ ಶಿವ, ಕಳೆದು ಹೋದ ತನ್ನ ತಂದೆಯ ಹುಡುಕಾಟದಲ್ಲಿ ತನ್ನನ್ನು ತಾನು ಹೇಗೆ ಪಡೆದುಕೊಳ್ಳುತ್ತಾನೆ ಎಂಬುದು ಚಿತ್ರದ ಸಾರಾಂಶ. Engineer ಗಳು ಸಿನಿಮಾ ಮಾಡಿದರೆ ಎಷ್ಟು technically advanced ಸಿನಿಮಾ ಮಾಡಬಲ್ಲರು ಎಂಬುದಕ್ಕೆ ಚಿತ್ರ ಸಾಕ್ಷಿ. ಎಡಿಟಿಂಗ್ ಮತ್ತು ಹಿನ್ನೆಲೆ ಸಂಗೀತ ಚಿತ್ರದ ಸೈಲೆಂಟ್ ಹೀರೋಗಳು.

4. ಎದೆಗಾರಿಕೆ
ತಾರಾಗಣ: ಆದಿತ್ಯ, ಆಕಾಂಕ್ಷ, ಅತುಲ್ ಕುಲಕರ್ಣಿ ಮತ್ತು ಅಚ್ಯುತ್ ಕುಮಾರ್

‘ನೀನೊಂದು ಮುಗಿಯದ ಮೌನ, ನಾ ಹೇಗೆ ತಲುಪಲಿ ನಿನ್ನಹಾಡು ಹೆಚ್ಚು ಕಮ್ಮಿ ಎಲ್ಲರೂ ಕೇಳಿಯೇ ಇರುತ್ತಾರೆ. ಆದರೆ ಯಾವುದೋ ಎದೆಗಾರಿಕೆ ಅಂತ ಫಿಲಂ ಅಂತೆ ಮಗಾ, ಇನ್ನೂ ನೋಡೋಕೆ ಆಗಿಲ್ಲ ಅನ್ನುವವರು ನೀವಾದರೆ, ಮೊದಲು ಚಿತ್ರ ನೋಡಿ, ಆಮೇಲಿಂದ್ ಆಮೇಲೆ. ಒಬ್ಬ ಸಾಮಾನ್ಯ ಬಾರ್ ಸಪ್ಲೈಯರ್ ಢೋಲಾಕಿಯಾನ ಜೀವ ಉಳಿಸಿ, ಸೋನಾ ಎಂಬ contract killer ಹೇಗಾಗುತ್ತಾನೆ? ಅವನಿಗೂ ಒಂದು ಖಾಸಗಿ ಜೀವನ ಇರಬಹುದಾ? ಇದ್ದರೆ ಸಮಸ್ಯೆಗಳಿಗೆ ಸಿಲುಕಿ ಆಕೆ ಏನಾಗುತ್ತಾಳೆ ಎಂಬುದನ್ನು ನಿರ್ದೇಶಕಿ ಸುಮನಾ ಕಿತ್ತೂರು ತುಂಬಾ ಶ್ರದ್ಧೆಯಿಂದ ಕಟ್ಟಿಕೊಟ್ಟಿದ್ದಾರೆ. ಆದಿತ್ಯ ಕೂಡ ಒಬ್ಬ ಹೀರೋನಾ ಎಂದು ನಿಮಗೆ ಅನಿಸಿದ್ದರೆ ಚಿತ್ರ ನೋಡೊದ ಬಳಿಕ ನಿಮ್ಮ ಅಭಿಪ್ರಾಯ ಬದಲಾಗೋದು ಖಚಿತ.

5. ಚಿಗುರಿದ ಕನಸು
ತಾರಾಗಣ: ಶಿವಣ್ಣ, ವಿದ್ಯಾ ವೆಂಕಟೇಶ್, ಅವಿನಾಶ್ ಮತ್ತು ಅನಂತ್ ನಾಗ್

ಟಿ ಎಸ್ ನಾಗಾಭರಣ ನಿರ್ದೇಶನದ ಶಿವರಾಂ ಕಾರಂತರ ಪುಸ್ತಕ ಆಧಾರಿತ ಚಿತ್ರ ಮನುಷ್ಯನ ಮೂಲದೊಂದಿಗಿನ ನಂಟು ಹುಡುಕುವ ಗುಣವನ್ನು ತುಂಬಾ ಆಪ್ತವಾಗಿ ತೆರೆದಿಡುತ್ತದೆ. ಎಷ್ಟೋ ಸಲ ನಮ್ ಅಜ್ಜನ ಅಪ್ಪ ಯಾರು? ಅವರ ಅಪ್ಪ ಯಾರು? ಅಂತ ನಮ್ಮ ತಂದೆ ತಾಯಿ ಅವರನ್ನು ಕೇಳಿರುತ್ತೇವೆ. ಛೇ, ಅಜ್ಜ ಅಜ್ಜಿ ಊರಿಗೆ ಹೋಗುವಂತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತಲ್ಲಾ ಅಂತ ಕನಸೂ ಕಂಡಿರುತ್ತೇವೆ. 30x40 ಜಾಗದಲ್ಲಿ 5 ಅಂತಸ್ತಿನ ಚಿಕ್ಕ ಚಿಕ್ಕ ಮನೆಗಳಲ್ಲಿ ಬೆಳೆದು ದೊಡ್ಡವರಾಗುವ ನಮ್ಮ ಮುಂದಿನ generation ಮಕ್ಕಳಿಗೆ ಬಗೆಯ ಆಸೆ ಮೂಡದೇ ಇರಬಹುದು. ಆದರೆ ಅಜ್ಜನ ಮನೆಯಲ್ಲಿ ಕಣ್ಣಾ ಮುಚ್ಚಾಲೆ ಆಟ ಆಡಿ, ಅಜ್ಜಿಯ ಕತೆಗಳನ್ನು ಕೇಳಿ ಬೆಳೆದ ನಮ್ಮ ಹಾಗೂ ಮುಂದೆ ಬರುವ ಅಷ್ಟೂ generation ಗಳು, ಚಿತ್ರವನ್ನು ನೋಡಿ ತಮ್ಮನ್ನು ತಾವು relate ಮಾಡಿಕೊಳ್ಳಬಹುದಾದ ಕಾಲಾತೀತ ಚಿತ್ರ ಇದು. ಎಲ್ಲೋ ಏನೋ ಆಗಬೇಕಿದ್ದ ನಾಯಕ ತನ್ನ ಮೂಲವನ್ನು ಹುಡುಕಿಕೊಂಡು ಬಂದು ತನ್ನ ತಾತನ ಜಮೀನನ್ನು ಉಳುಮೆ ಮಾಡುತ್ತಾನೆ, ತನ್ನೂರಿಗೆ ಸೇತುವೆ ಕಟ್ಟಿಸುತ್ತಾನೆ; ಕೇಳೋಕೆ ಎಲ್ಲಾ ಸಿಂಪಲ್ ಅನಿಸಿದರೂ ಅವನು ಎದುರಿಸುವ ಸವಾಲುಗಳೇನು? ಪ್ರಸ್ತುತವನ್ನು ಧಿಕ್ಕರಿಸಿ ಹಳ್ಳಿಗೆ ಹೊರಡುವ ಅವನ ಮಾನಸಿಕ ತುಮುಲಗೆಳೇನು ಎಂಬಿತ್ಯಾದಿ ಅಂಶಗಳನ್ನು ತುಂಬಾ ಚೆನ್ನಾಗಿ ತೋರಿಸಿದ್ದಾರೆ.

6. ಲೂಸಿಯಾ
ತಾರಾಗಣ: ಸತೀಶ್ ನೀನಾಸಂ, ಶೃತಿ ಹರಿಹರನ್ ಮತ್ತು ಅಚ್ಯುತ್ ಕುಮಾರ್

ಥೋ, ಇಷ್ಟು ಕೆಟ್ಟದಾಗಿ ಕೂಡ ಪಿಚ್ಚರ್ ಮಾಡ್ತಾರಾ? ನಾನು ಡೈರೆಕ್ಟ್ರು ಆಗಿದ್ದರೆ ಥರ ending ನೀಡುತ್ತಿದ್ದೆ. ನಾನು ಹೀರೋ ಆಗಿದ್ದರೆ ದೃಶ್ಯ ಎಷ್ಟೋ ಚೆನ್ನಾಗಿ ಮಾಡುತ್ತಿದ್ದೆ, ಇತ್ಯಾದಿಯಾಗಿ ಯಾವಾಗಲಾದರೂ ಒಮ್ಮೆ ಅನಿಸಿರುತ್ತದೆ. ಆದರೆ ಕೌಟುಂಬಿಕ ಒತ್ತಡ, ಕೆಲಸದ ನಡುವೆ ಸಮಯದ ಅಭಾವ, ಹಣದ ಕೊರತೆ, ಇತ್ಯಾದಿ ಕಾರಣಗಳಿಂದ ಅದು ಅಪೂರ್ಣವಾಗಿ ಉಳಿದಿರುತ್ತದೆ. ಆದರೆ ಇರುವ ಕೆಲಸ ಜೊತೆಗೆ ಪ್ರತಿಯೊಬ್ಬ ಸಾಮಾನ್ಯನೂ ನಿರ್ಮಾಪಕನಾಗಬಹುದಾದ ಒಂದು ಹೊಸ ಸಾಧ್ಯತೆಯನ್ನು Crowd Funding ಮೂಲಕ ಕನ್ನಡದ ಜನರ ಮುಂದೆ ನಿರ್ದೇಶಕ ಪವನ್ ಕುಮಾರ್ ತೆರೆದಿಟ್ಟರು. ಆಮೇಲೆ ಆಗಿದ್ದೆಲ್ಲಾ ಈಗ ಇತಿಹಾಸ. ಈಗ ಕೆಲವು ದಿನಗಳ ಹಿಂದೆ, Demonization ಹೊಡೆತಕ್ಕೆ ಬ್ಯಾಂಕಲ್ಲಿ 4-5 ಪಟ್ಟು ಕೆಲಸ ಜಾಸ್ತಿಯಾಗಿದೆ ಅಂತ ನಾನು ತುಂಬಾ ನೊಂದುಕೊಳ್ಳುತ್ತಿದ್ದೆ. ಮನೆಗೆ ಬಂದರೆ ಸರಿಯಾಗಿ ನಿದ್ದೆ ಮಾಡಲೂ ಆಗುತ್ತಿರಲಿಲ್ಲ. ಎಲ್ಲಾ ಬಿಟ್ಟು ಯಾವುದಾದರೂ ಮಠ ಸೇರಿಕೊಳ್ಳುವುದು ವಾಸಿ ಅಂತ ಅನಿಸಿದ್ದು ಸುಳ್ಳಲ್ಲ. ಎಲ್ಲಾ ಬೆಳವಣಿಗೆಗಳನ್ನು facebook ನಲ್ಲಿ ಹಂಚಿಕೊಂಡಾಗ Welcome to IT World ಅಂತ ನಮ್ ಹುಡುಗ ಕಾಮೆಂಟ್ ಮಾಡಿದ್ದ. Personal issue aside, ಕೆಲಸದಲ್ಲಿ ಒತ್ತಡ ಜಾಸ್ತಿ ಆದಾಗ, ಮನೆಯಲ್ಲಿ ಜಗಳವಾದಾಗ ರೀತಿ ಒಂದು ಪರ್ಯಾಯ ಜೀವನ (alternate life) ಕನಸು ಎಲ್ಲರಿಗೂ ಬಂದಿರುತ್ತದೆ. ಅಂತಹ ಕನಸು ನನಸು ಮಾಡುವ, ಬೇಕಾದ ಕನಸು ಬೀಳುವಂತಹ ಮಾದಕ ಮಾತ್ರೆ ಸಿಕ್ಕರೆ, ಏನೇನಾಗಬಹುದು ಅಂತ ತುಂಬಾ ವಿಶಿಷ್ಟ ಬಗೆಯ ಚಿತ್ರಕಥೆಯ ಮೂಲಕ ಪ್ರಸ್ತುತ ಪಡಿಸಲಾಗಿದೆ. ಆಪ್ತಮಿತ್ರ ಚಿತ್ರದಲ್ಲಿ ದಾದಾ ಹೇಳಿರುವಂತೆ “Experience cannot be explained, ಅನುಭವಾನ, ಅನುಭವಿಸಬೇಕಷ್ಟೇ”; ಲೂಸಿಯಾ ಕೂಡ ಅಂಥದೇ ವಿಶಿಷ್ಟ ಅನುಭವ. ಗೋಬಸಾಮೈ ಥರ ಚಿತ್ರ ಕೂಡ ಮೆಟ್ರೋ ಹಿಟ್, ಗ್ರಾಮೀಣ ಪ್ರೇಕ್ಷಕರಿಗೆ ಚಿತ್ರ ಬಗ್ಗೆ ಮಾಹಿತಿ ಇಲ್ಲದಿರುವ ಸಾಧ್ಯತೆ ಇರುವುದರಿಂದ ಚಿತ್ರ ಪಟ್ಟಿಯಲ್ಲಿದೆ.

7. A
ತಾರಾಗಣ: ಉಪೇಂದ್ರ ಮತ್ತು ಚಾಂದಿನಿ ಸಾಷ

ಚಿತ್ರದ ಬಗ್ಗೆ ಬರೆಯುವ ಮುನ್ನ ಮೈಂಡ್ ಎರಡು‌‌ ಸೆಕೆಂಡ್ ಸ್ತಬ್ಧ ಆಯಿತು. ಎಲ್ಲಿಂದ ಶುರುಮಾಡಲಿ, ಹೇಗೆ ಮುಗಿಸಲಿ ಅಂತ. Because, ರಾಮಾಯಣವನ್ನು ಉದಾಹರಣೆಗೆ ತೆಗೆದುಕೊಂಡರೆ ರಾಮ-ಲಕ್ಷಣರ ಬಾಲ್ಯದಿಂದಲೇ ಕಥೆ ಶುರು ಮಾಡಬೇಕಿಲ್ಲ, ರಾಮಾಂಜನೇಯ ಯುದ್ಧದಿಂದ ಶುರು ಮಾಡಿ, ಅಲ್ಲೊಂಚೂರು flashback, ಇಲ್ಲೊಂಚೂರು ಟ್ವಿಸ್ಟ್ ಕೊಟ್ಟು, ಪ್ರಸ್ತುತ ಪಡಿಸಬಹುದು ಅಂತ, ತೋರಿಸಿಕೊಟ್ಟ ಚತುರ, ಬುದ್ಧಿವಂತ ಉಪೇಂದ್ರ ಅವರು. ಉಪೇಂದ್ರ ಬರುವ ಮುಂಚೆ ಯಾರೂ ಚಿತ್ರಕಥೆಯಲ್ಲಿ ಕರಾಮತ್ತು ತೋರಿಸಿರಲಿಲ್ಲ ಅಂತ ಹೇಳಿಲ್ಲ, but ಉಪ್ಪಿ ಚಿತ್ರಗಳನ್ನು blank mind ಇಂದ ಮೊದಲ ಬಾರಿ ನೋಡಿದಾಗ ಆಗುವ ಅನುಭವದ ಕಿಕ್ಕೇ ಬೇರೆ. ಮೇಲ್ನೋಟಕ್ಕೆ ಒಬ್ಬ ಅಸಾಧಾರಣ ನಿರ್ದೇಶಕ ಮತ್ತು ಒಬ್ಬ ಪ್ರಖ್ಯಾತ ನಾಯಕಿ ನಡುವೆ ನೆಡೆಯುವ Hate Story ಯಂತೆ ಕಂಡರೂ ಕನ್ನಡ ಚಿತ್ರರಂಗ ಕಂಡಿರುವ ಕೆಲವು ಅಮೋಘ ಅಪೂರ್ವ ಪ್ರೇಮಕಥೆಯಲ್ಲಿ ಇದೂ ಒಂದು ತಪ್ಪಾಗಲಾರದು. ಮೊದಲು ನಾಯಕ ನಾಯಕಿಯ ಪ್ರೀತಿಯನ್ನು ತಿರಸ್ಕರಿಸುತ್ತಾನೆ. ನಂತರ ನಿಧಾನವಾಗಿ ಅವಳ ಪ್ರೀತಿಯಲ್ಲಿ ಮುಳುಗಿ ಕೆಲಸದಿಂದ ವಿಮುಖನಾಗುತ್ತಾನೆ. ಕಡೆ ನಾಯಕಿ ಒಂದೊಂದೇ ದೊಡ್ಡ ದೊಡ್ಡ ಚಿತ್ರಗಳನ್ನು ಒಪ್ಪಿಕೊಳ್ಳುತ್ತಾ ಎತ್ತರಕ್ಕೆ ಬೆಳೆಯುತ್ತಾಳೆ. ನಂತರ, ರಾಜಕೀಯ ನಾಯಕರ, ಸಿನಿಮಾ ನಿರ್ಮಾಪಕರ ಕರಾಳ ಮುಖವನ್ನು ಬಯಲಿಗೆಳೆಯುವ ನಾಯಕನ '' ಚಿತ್ರವನ್ನು ನಿಲ್ಲಿಸಲೆಂದೇ ನಾಯಕಿ ಚಾಂದಿನಿ ಬಂದಿದ್ದಾಳೆಂದು ನಾಯಕನಿಗೆ ಅರಿವಾಗುತ್ತದೆ. ಎಲ್ಲದರ ಹಿಂದಿನ ನಿಗೂಢತೆ ಅರಿವಾಗಬೇಕಾದರೆ ನೀವು ಚಿತ್ರ ನೋಡಬೇಕು. ವೈಯಕ್ತಿಕವಾಗಿ ನಾನು ಉಪ್ಪಿ ಅಭಿಮಾನಿಯಾದ್ದರಿಂದ ಪ್ರತಿ ಬಾರಿ ನೋಡಿದಾಗಲೂ ಇನ್ನೂ ಏನೇನೋ ಅರ್ಥವಾಗಿ ಹತ್ತಿರವಾಗುವ ಚಿತ್ರ . ‘A’ is not just ‘a’ movie, it’s one of ‘a’ kind movie ಎಂದು ಹೇಳಲಡ್ಡಿಯಿಲ್ಲ.

8. ಕಡ್ಡಿಪುಡಿ
ತಾರಾಗಣ: ಶಿವಣ್ಣ, ರಾಧಿಕಾ ಪಂಡಿತ್ ಮತ್ತು ಅನಂತ್ ನಾಗ್

The difference between shivanna and kiccha is that, kiccha is obsessed with how 'long' his height is and shivanna is obsessed with how differently he uses his 'long' ಅಂತ ನಮ್ ಹುಡುಗ ಲಕ್ಕಿ ಒಮ್ಮೆ ಸ್ಟೇಟಸ್ ಹಾಕಿದ್ದ. ಕಲಾವಿದ ಯಾವಾಗಲೂ ನೀರಿನ ಥರ ಇರಬೇಕು, ಯಾವುದೇ ಪಾತ್ರ ಎಂಬ ಲೋಟಕ್ಕೆ ಹಾಕಿದರೂ, ಅಲ್ಲಿ ನಟ ಕಾಣಬಾರದು, ಪಾತ್ರವೇ ಕಾಣಬೇಕು ಎಂಬುದು ಕಲಾ ಪ್ರಪಂಚ ಪಂಡಿತರ ಅಂಬೋಣ. ಈಗಾಗಲೇ ಶಿವಣ್ಣ ಅಭಿನಯದ ಓಂ world record hit ಆಗಿದೆ, ಜೋಗಿ ಕೂಡ industry hit ಅನಿಸಿಕೊಂಡಿದೆ, ಸಂತ, ಡಾನ್, ಇತ್ಯಾದಿ ಹೆಸರುಗಳಲ್ಲಿ ಬಂದ ಚಿಕ್ಕ ಚಿಕ್ಕ ರೌಡಿಸಂ ಚಿತ್ರಗಳು ಲೆಕ್ಕ ಇಟ್ಟಿಲ್ಲ, ಗ್ಯಾಪಲ್ಲಿ ಶಿವಣ್ಣ ಅವರಿಗೆ ಕಡ್ಡಿಪುಡಿ ಹೆಸರಿನ ಮತ್ತೊಂದು ರೌಡಿಸಂ ಚಿತ್ರ ಬೇಕಿತ್ತಾ ಅಂತ ಚಿತ್ರ ನೋಡುವ ಮೊದಲು ಅನಿಸಿದ್ದು ಸುಳ್ಳಲ್ಲ. ಒಮ್ಮೆ ಚಿತ್ರ ನೋಡಿ ಅದರ hangover ಗೆ ಎಲ್ಲವೂ ಮರೆತು ಹೋಗುವ ಮಟ್ಟಿಗೆ ಪ್ರಭಾವ ಬೀರಿದ ಚಿತ್ರ ಕಡ್ಡಿಪುಡಿ. ಎಲ್ಲಾ ರೌಡಿಸಂ ಚಿತ್ರಗಳಂತೆ, ಅಚಾನಕ್ ಆಗಿ ನಾಯಕ ರೌಡಿಸಂಗೆ ಬರುವ ಸಾಮಾನ್ಯ ಕಥೆ ಇಲ್ಲೂ ಇದೆಯಾದರೂ, ಸೂರಿ ಮೇಕಿಂಗ್, ಅನಂತ್ ನಾಗ್ ತೂಕದ ಮಾತುಗಳು, ಮತ್ತು ಹಲವು ಶೇಡ್-ಗಳಲ್ಲಿ ಕಡ್ಡಿಪುಡಿ ಪಾತ್ರದಲ್ಲಿ ಮುಳುಗಿದಂತೆ ಕಾಣುವ ಶಿವಣ್ಣ ಅಭಿನಯ ನೋಡಲಾದರೂ ನೀವೊಮ್ಮೆ ಚಿತ್ರ ನೋಡಲೇಬೇಕು. ಹರಿಕೃಷ್ಣ ಹಿಂಗೂ ಸಂಗೀತ ಮತ್ತು ಹಿನ್ನೆಲೆ ಸಂಗೀತ ಕೊಡುತ್ತಾರಾ ಅಂತ ಶಾಕ್ ಆಗಲೂಬಹುದು, ಹುಷಾರಾಗಿರಿ.

9. ಡ್ರಾಮಾ
ತಾರಾಗಣ: ಯಶ್, ರಾಧಿಕಾ ಪಂಡಿತ್, ಸತೀಶ್ ನೀನಾಸಂ, ಸಿಂಧು ಲೋಕನಾಥ್ ಮತ್ತು ಅಂಬರೀಶ್


ಅದಾಗಲೇ ಮುಂಗಾರು ಮಳೆ ಮತ್ತು ಗಾಳಿಪಟ ಚಿತ್ರದ ಮೂಲಕ ಯೋಗರಾಜ್ ಭಟ್ ಸ್ಟಾರ್ ನಿರ್ದೇಶಕ ಅನಿಸಿಕೊಂಡಿದ್ದರು, ಯಶ್ ಕೂಡ ತಮ್ಮ ನಟನಾ ಕೌಶಲ್ಯದಿಂದ ಸುದ್ದಿ ಮಾಡಿದ್ದರು, ಸಾಲದ್ದಕ್ಕೆ ಈಗ ನಿಶ್ಚಿತಾರ್ಥವಾಗಿ ಮದುವೆಯ ಹೊಸ್ತಿಲಲ್ಲಿ ಇರುವ ಯಶ್ - ರಾಧಿಕಾ ಪಂಡಿತ್ ಆಗ ಪ್ರೇಮ ಪಕ್ಷಿಗಳು ಅಂತ ಗಾಸಿಪ್ ಹಬ್ಬಿತ್ತು, ಸಾಲದ್ದಕ್ಕೆ, ಅವರಿಬ್ಬರೂ ಅಭಿನಯದ ಎರಡನೇ ಚಿತ್ರ ಬೇರೆ; ಆದ್ದರಿಂದ ಸಹಜವಾಗಿ ಡ್ರಾಮಾ ಚಿತ್ರದ ಮೇಲೆ ಸಹಜವಾಗಿ expectations ಮುಗಿಲು ಮುಟ್ಟಿತ್ತು. ಉಪ್ಪಿ ಹೇಳುವಂತೆ Expectation is very injurious to health ಎಂಬ ಮಾತು ಆಗ ಇನ್ನೂ ಯಾರಿಗೂ ಗೊತ್ತಿರದಿದ್ದ ಕಾರಣ ಡ್ರಾಮಾ ಚಿತ್ರ ಹಿಟ್ ಆದರೂ ಅಷ್ಟು ಜನಕ್ಕೆ ಇಷ್ಟವಾಗಲೇ ಇಲ್ಲ. ಹೋಯ್ತಲ್ಲಾ 50 ಅಂತ ಬಹಳ ಜನ ನೊಂದುಕೊಂಡರು. ಆದರೆ ಡ್ರಾಮಾ ಯೋಗರಾಜ್ ಭಟ್ ಮಾತ್ರವೇ ಮಾಡಬಹುದಾದ ಒಂದು ಪ್ರೇಮ ವೇದಾಂತ ಹಾಸ್ಯ ಮಿಶ್ರಿತ ಕಲಾಕೃತಿ ಎಂಬುದು ನಿಜ. ಅದು ಯಾವುದೋ ಹಳ್ಳಿಯಲ್ಲಿ ಓತ್ಲಾ ಹೊಡೆದುಕೊಂಡು ಆರಾಮಾಗಿದ್ದ ಇಬ್ಬರು ತರ್ಲೆಗಳು ಬೊಂಬೆ ಶಾಸ್ತ್ರದವನ ಮಾತಿನಂತೆ ಬಂದು ಕಾಲೇಜ್ ಸೇರಿಕೊಳ್ಳುತ್ತಾರೆ. ಅಲ್ಲಿ ಎರಡು ಲವ್ ಸ್ಟೋರಿಗಳು, ಎಲ್ಲಾ ಸರಿಯಾಗಿ ಹೋಗುತ್ತಿರುವ ಹೊತ್ತಿಗೆ ಮಾಡಿಕೊಂಡ ಏನೇನೋ ಯಡವಟ್ಟುಗಳು ನಾಲ್ಕು ಜನರನ್ನು ಸಮುದ್ರದ ತೀರಕ್ಕೆ ತಂದು ನಿಲ್ಲಿಸುತ್ತದೆ. ಜಾಗದಲ್ಲಿ ಅವರಿಗೆ ಅರಿವಾಗುವ ಸತ್ಯ ಏನು? ಹೀಗೆ ಬಂದು ಹಾಗೆ ಹೋಗುವ ಅಂಬರೀಶ್ ನಿಜವಾಗಿಯೂ ಬೊಂಬೆ ಶಾಸ್ತ್ರ ಹೇಳುವ ಜ್ಯೋತಿಷಿಯಾ? ಎಂಬ ಹಲವಾರು ವಿಷಯಗಳನ್ನು ಹಾಸ್ಯದ ಲೇಪನದೊಂದಿಗೆ ವೇದಾಂತ ಸೇರಿಸಿ ನೀಡಿರುವ ಭಟ್ಟರ ಅಡುಗೆ ಸವಿದನನೇ ಬಲ್ಲ, ಅದರ ರುಚಿಯಾ. ಭಟ್ಟರ ಪಾಕಶಾಲೆಯಲ್ಲಿ ತಯಾರಾದ ಇನ್ನೂ ಒಳ್ಳೊಳ್ಳೆ ಅಡುಗೆ ಇದೆಯಾದರೂ ಡ್ರಾಮಾ, ಒಂಚೂರು ವಿಭಿನ್ನ.

10. ಮಿಂಚಿನ ಓಟ
ತಾರಾಗಣ: ಅನಂತ್ ನಾಗ್, ಶಂಕರ್ ನಾಗ್ ಮತ್ತು ಲೋಕನಾಥ್



ಶಂಕರ್ ನಾಗ್ ಇವತ್ತು ಬದುಕಿರಬೇಕಿತ್ತು, ನಮ್ ಇಂಡಸ್ಟ್ರಿನ ಎಲ್ಲೋ ತಗೊಂಡು ಹೋಗುತ್ತಿದ್ದರು, ಶಂಕರ್ ನಾಗ್ ಹಂಗೆ, ಶಂಕರ್ ನಾಗ್ ಹಿಂಗೆ ಅಂತ ಹಲವಾರು ಕಡೆ ಪೇಪರ್ ನಲ್ಲಿ ಓದಿ, ಟಿವಿಯಲ್ಲಿ ನೋಡಿದ ಮೇಲೆ, What's so great about Shankar Nag? ಎಂಬ ಪ್ರಶ್ನೆ ಕಾಡಿತ್ತು. ಕರಾಟೆ ಕಿಂಗ್, ಆಟೋ ರಾಜ ಎಂಬಿತ್ಯಾದಿ ಹೆಸರುಗಳಿಂದ ಪರಿಚಿತರಾಗಿದ್ದರೂ ಶಂಕರ್ ನಾಗ್ ಕಾಲಕ್ಕೆ, few times ahead ಯೋಚಿಸುತ್ತಿದ್ದ ತಂತ್ರಜ್ಞಾನಿ. ಸಿನಿಮಾನೇ ಬೇರೆ, ಲೈಫೇ ಬೇರೆ ಎಂಬುದು ನಿಜವಾದರೂ ಒಬ್ಬೊಬ್ಬ ನಿರ್ದೇಶಕನಿಗೆ ತನ್ನದೇ ಆದ ಒಂದು ಸ್ಟೈಲ್ ಆಫ್ ಮೇಕಿಂಗ್ ಇರುತ್ತದೆ. ಅದರ ಜಾಡು ಹಿಡಿದು ಹೋದರೆ ನಿರ್ದೇಶಕನ ಯೋಚನಾ ಲಹರಿ ಒಂದು ಮಟ್ಟಕ್ಕೆ ಪ್ರಾಪ್ತಿಯಾಗಬಹುದು. ಶಂಕರ್ ನಾಗ್ ಅವರ ಚಿತ್ರಗಳು, ವಿಶೇಷವಾಗಿ ಅವರ ನಿರ್ದೇಶನದ ಚಿತ್ರಗಳನ್ನು ನೋಡಿದಾಗ ಮೇಲಿನ What's so great about Shankar Nag? ಪ್ರಶ್ನೆಗೆ ಉತ್ತರ ದಕ್ಕುತ್ತಾ ಹೋಗುತ್ತದೆ. ಶಂಕರ್ ನಾಗ್ ಅವರ ನಿರ್ದೇಶನದ Malgudi Days, ಗೀತಾ, ಜನ್ಮ ಜನ್ಮದ ಅನುಬಂಧ, ಒಂದು ಮುತ್ತಿನ ಕಥೆ, ಅಭಿನಯದ ಸಿ.ಬಿ.. ಶಂಕರ್, ಹೊಸ ಜೀವನ, ಎಲ್ಲವೂ ಒಂದಕ್ಕಿಂತ ಒಂದು ಚೆನ್ನಾಗಿದ್ದರೂ ಮಿಂಚಿನ ಓಟ ಎಲ್ಲಾ ಚಿತ್ರಗಳಿಂದ ವಿಭಿನ್ನವಾಗಿ ನಿಲ್ಲುತ್ತದೆ. ಕೆಟ್ಟ ಘಳಿಗೆಯ ಪರಿಣಾಮದಿ ಕಳ್ಳತನ ಮಾಡಲು ಜೊತೆಯಾಗುವ ಮೂವರ prison break ಸಾಹಸವೇ ಮಿಂಚಿನ ಓಟ. ಹೆಸರಿಗೆ ತಕ್ಕಂತೆ ಮಿಂಚಿನ ವೇಗದಲ್ಲಿರುವ ಕಥಾ ನಿರೂಪಣೆ ಪ್ರೇಕ್ಷಕನನ್ನು ಸೀಟಿನ ತುದಿಗೆ ತಂದು ಕುಳ್ಳಿರಿಸುವುದರಲ್ಲಿ ಅನುಮಾನವಿಲ್ಲ. ನೈಜ ಕಥೆ ಆಧಾರಿತ ಚಿತ್ರ ಕೂಡ ಆಗಿರುವುದರಿಂದ happy ending ಇಲ್ಲಿಲ್ಲ, ಆದರೆ ಯಾವ ರೀತಿ ಕೊನೆಯಾಗುತ್ತದೆ ಎಂಬ ಕುತೂಹಲ ಪ್ರತಿ ಫ್ರೇಮಿನಲ್ಲೂ ಹೆಚ್ಚಾಗುತ್ತಾ ಹೋಗುತ್ತದೆ. ಸಿನಿಮಾ ಕಲಿಸುವ ಕಾಲೇಜುಗಳಲ್ಲಿ ಚಿತ್ರವನ್ನು ಒಂದು case study ಯಾಗಿ ನೀಡಬಹುದಾದ timeless ಚಿತ್ರ, ಮಿಂಚಿನ ಓಟ.

ಉಸ್ಸಪ್ಪ, ಇಷ್ಟೇ ನೋಡಿ ಪಾ, ಕನ್ನಡದ ಹತ್ತು underrated ಚಿತ್ರಗಳನ್ನು ಪಟ್ಟಿ ಮಾಡಿ, ಯಾಕೆ ಚಿತ್ರ ನೋಡಬೇಕು ಅಂತ ವಿವರಿಸಲು ಒಂದು ಅಂಕಣ ಬರೆದರೆ ಹೇಗೆ ಎಂಬ ಐಡಿಯಾ ಬಂತು. ಅದರ ಫಲವೇ ಅಂಕಣ. ನಾನೇನು ದೊಡ್ಡ 'ಗ್ಯಾನಿ' ಅಲ್ಲ, ಸಿನಿಮಾದಲ್ಲಿ ಕೆಲಸ ಕೂಡ ಮಾಡಿದ ಅನುಭವ ಮೊದಲೇ ಇಲ್ಲ. Underrated ಪದ ಕೇಳಿದ ತಕ್ಷಣ ನೆನಪಾದ 10 ಚಿತ್ರಗಳ ಬಗ್ಗೆ ಮಾತ್ರ ಇಲ್ಲಿ ಬರೆದಿದ್ದೇನೆ. ಯಾವುದಾದರೂಚಿತ್ರ ಪಟ್ಟಿ ಸೇರಲೇಬೇಕಿತ್ತು, ಮಿಸ್ ಆಗಿದೆ ಅನಿಸಿದರೆ ಕಾಮೆಂಟ್ ಮಾಡಿ, ಮಾತಾಡೋಣ. ಅಲ್ಲಿಯವರೆಗೂ, happy watching.