ಅಕ್ಟೋಬರ್ 20, 2016

ಷೇರು ಮಾರುಕಟ್ಟೆ: ಒಂದು ಪ್ರಾರಂಭಿಕ ಕೈಪಿಡಿ




ಯಾರಿಗೆ ಸಾಲುತ್ತೆ ಸಂಬಳ ?
ಯಾರಿಗೆ ಸಾಲುತ್ತೆ ಸಂಬಳ ?
ಯಾರಿಗೆ ಸಾಲುತ್ತೆ ಸಂಬಳ ಚಿತ್ರದಲ್ಲಿ ಶಶಿ ಕುಮಾರ್, ಮೋಹನ್ ಹಾಗೂ ಕರಿಬಸವಯ್ಯ ಲೂನಾ ಅಥವಾ ಟಿವಿಎಸ್ ಗಾಡಿಯ ಮೇಲೆ ಹೀಗೊಂದು ಹಾಡು ಹಾಡುತ್ತಾ ಬರುವ ಹಳೇ ಹಾಡು ನೀವು ನೋಡಿರಬಹುದು. ಆ ಸಿನಿಮಾ ಬಂದು ಆಗಲೇ ಸುಮಾರು 16 ವರ್ಷ ಆಗಿದೆ. ಆದರೂ ಆ 'ಯಾರಿಗೆ ಸಾಲುತ್ತೆ ಸಂಬಳ' ಅನ್ನೋ ಪ್ರಶ್ನೆ ಇಂದಿಗೂ ಪ್ರಸ್ತುತ. ಎರಡು ವರ್ಷದ ಹಿಂದೆ ನನ್ನ ಬಳಿ‌ ಕೆಲಸ ಇರಲಿಲ್ಲ. ಆಗ 10,000 ಸಂಬಳ‌ಇರೋ ಕೆಲಸ ಸಿಕ್ಕರೆ ಸಾಕಪ್ಪ ಹೆಂಗೋ ಮಜಾ ಮಾಡ್ಕೊಂಡು ಇರಬಹುದು ಅಂದ್ಕೊಳ್ತಿದ್ದೆ. ಆದರೆ  ಈಗ 20,000 ಸಂಬಳ ಬರುವ ಉದ್ಯೋಗವಿದ್ದರೂ ತಿಂಗಳ ಕೊನೆಯಲ್ಲಿ ಕ್ರೆಡಿಟ್ ಕಾರ್ಡ್ ಮೊರೆ ಹೋಗದೇ ವಿಧಿಯಿಲ್ಲ. ಮೊನ್ನೆ ಹೀಗೆ ಮಾತನಾಡುವಾಗ ನಮ್ಮ ಹುಡುಗನೊಬ್ಬ "ಅಯ್ಯೋ, ಏನ್ ಮಾಡ್ಲಿ ಮಗಾ, ನನ್ನ ಸಂಬಳ ತುಂಬಾ ಕಮ್ಮಿ, ರೋಡಲ್ಲಿ‌ ಪಾನಿ‌ ಪೂರಿ ಮಾರೋನು ನನಗಿಂತ ಹೆಚ್ಚಿಗೆ ದುಡಿಯುತ್ತಾನೆ. ಯಾರಿಗ್ ಹೇಳೋಣ ನಮ್ಮ ಪ್ರಾಬ್ಲಮ್ಮು" ಅಂತ ಅವಲತ್ತುಕೊಳ್ಳುತ್ತಿದ್ದ. "ಹೋಗ್ಲಿ ಬಿಡು ಮಗಾ, ಪಾಪ ಅವನ ತಟ್ಟೆಯ ಪಾನಿ ಪೂರಿ ಮೇಲೆ ಯಾಕೆ ಕಣ್ಣು ಹಾಕ್ತೀಯಾ, ನಿನ್ ತಟ್ಟೆಯಲ್ಲಿರೋ ಮುದ್ದೆ ಬಸ್ಸಾರನ್ನೇ ಪಾಯಸ ಅಂದ್ಕೊಂಡು ತಿನ್ನುವಂತೆ. ಸರಿ ಬಿಡು, ಎಷ್ಟು ನಿನ್ ಪ್ಯಾಕೇಜ್ ಹೇಳು ಹೋಗಲಿ" ಅಂದೆ. "ಹೇಳೋಕೆ ನಂಗೇ ಅಳು ಬರುತ್ತೆ ಮಗಾ, ಜಸ್ಟ್ 52,000 ಮಾತ್ರ" ಅನ್ನೋದಾ? ಅತ್ತು ಅತ್ತು ನನಗೇ ಎರಡು ದಿನ ನಿದ್ದೆ ಬರಲಿಲ್ಲ. Jokes aside, ತಿಂಗಳ ಸಂಬಳಕ್ಕೆ ಅಂಬಾ ಎಂದು ಕಾಯುವ ನಮ್ಮಂಥವರಿಂದ ಹಿಡಿದು ಅಂಬಾನಿವರೆಗೂ 'ಸಂಬಳ' ಅಥವಾ 'ಲಾಭ' ಯಾರಿಗೂ ಸಾಕಾಗೋದಿಲ್ಲ. ಉಳಿಸಿದ ಹಣವೇ ಗಳಿಸಿದ ಹಣ ಎಂದು ಹೇಳುತ್ತಾರಾದರೂ, 'ಉಳಿಸಿದ' ಹಣವನ್ನು 'ದುಡಿಸಲು' ಬಿಡುವುದು ಜಾಣತನ. Confused? ನಿಮ್ಮ ಉಳಿತಾಯದ ಹಣವನ್ನು ಪೋಸ್ಟ್ ಆಫೀಸ್, ಬ್ಯಾಂಕ್, PPF, ಇನ್ಶೂರೆನ್ಸ್ ಹೀಗೆ ಹಲವಾರು ಕಡೆ ತೊಡಗಿಸಬಹುದು. ಆದರೆ ಇಲ್ಲೆಲ್ಲಾ profit margin ಕಮ್ಮಿ. ಬದಲಾದ ಕಾಲದಲ್ಲಿ ಷೇರು ಮಾರುಕಟ್ಟೆಯಲ್ಲಿ ಹಣ ಹೂಡುವುದು ಲಾಭದಾಯಕ ಎಂದು ಸಾಬೀತಾಗಿದೆ. ಆದರೆ ಷೇರು ಮಾರುಕಟ್ಟೆ ಅತ್ಯಂತ volatile ಕೂಡ ಆಗಿದೆ. ಆದ್ದರಿಂದ ಜಾಣತನದಿಂದ ಹೆಜ್ಜೆ ಇಡಬೇಕಾದದ್ದು ಅನಿವಾರ್ಯ. ಅದರ ಕುರಿತು ಕೆಲವು ಟಿಪ್ಸ್ ಗಳು ಇಲ್ಲಿವೆ:

1. ನೀರಿನ ಆಳ ತಿಳಿಯೋದು ಹೇಗೆ?
ಷೇರು ಪೇಟೆ ಅಂದರೆ ನನಗೇನೂ ಗೊತ್ತಿಲ್ಲಪ್ಪ, ನಮ್ ಗೆಳೆಯನ ಮಾವನ ಚಿಕ್ಕಪ್ಪನ, ಸೋದರ ಅಳಿಯನೊಬ್ಬ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿ ಮುಳುಗಿ ಹೋದರಂತೆ ಎಂಬಿತ್ಯಾದಿ ಭಯ ನಿಮ್ಮನ್ನು ಆವರಿಸಿದ್ದರೆ ಮೊದಲು ಅವನ್ನು ತಲೆಯಿಂದ ತೆಗೆದು ಹಾಕಿ. ಲಾಭ ನಷ್ಟ ಎಂಬುದು ವ್ಯಾಪಾರ ಎಂಬ ನಾಣ್ಯದ ಎರಡು ಮುಖಗಳಿದ್ದಂತೆ. ಇದಕ್ಕೆ ಷೇರು ಮಾರುಕಟ್ಟೆಯೂ ಹೊರತಲ್ಲ. ಷೇರು ಮಾರುಕಟ್ಟೆಯ ಜ್ಞಾನ ನಿಜವಾಗಿಯೂ ಸಾಗರದಷ್ಟು ಬೃಹತ್ ಎಂದರೆ ತಪ್ಪಾಗಲಾರದು. ಈ ಸಾಗರದ ಆಳ ಅಗಲ ತಿಳಿಯಬೇಕೆಂದರೆ ಮೊದಲು ಒಂದು Demat Account ಮಾಡಿಸುವ ಮೂಲಕ ನೀವು ನೀರಿಗಿಳಿಯಬೇಕು. Zerodha, Kotak Mahindra, Karvi, Angel Broking, SBI, sharekhan ಇತ್ಯಾದಿ ಹಲವಾರು ಬ್ರೋಕಿಂಗ್ ಸಂಸ್ಥೆಗಳು ಈ ಸೇವೆ ಒದಗಿಸುತ್ತವೆ. ಡೀಮ್ಯಾಟ್ ಖಾತೆ ಇಲ್ಲದವರು‌ ಮೊದಲು ಒಂದು ಖಾತೆ ತೆರಿಯಿರಿ, ಆಮೇಲಿಂದ್ ಆಮೇಲೆ!


2. ಗುರು ಬ್ರಹ್ಮ ಗುರು ವಿಷ್ಣು
ಜೀವನದಲ್ಲಿ ಹಿಂದೆ ಗುರು ಮುಂದೆ ಗುರಿ ಇರಬೇಕು ಎಂಬ ಮಾತು ಕೇಳಿರುತ್ತೀರಾ. Stock market ಕೂಡ ಇದಕ್ಕೆ ಹೊರತೇನಲ್ಲ. ಷೇರು ಮಾರುಕಟ್ಟೆಯ ಕುರಿತು ಪುಸ್ತಕ ಓದುವ, ಇಲ್ಲವೇ ಕಾರ್ಯಾಗಾರ ಸೇರುವ, ಅಥವಾ ಆನ್ಲೈನ್ ಕಲಿಕಾ ವೀಡಿಯೋಗಳನ್ನು ನೋಡುವುದನ್ನು ರೂಢಿಸಿಕೊಳ್ಳಿ. ಈಗಾಗಲೇ ಷೇರು ಮಾರುಕಟ್ಟೆಯ ವ್ಯವಹಾರಗಳಲ್ಲಿ ಪ್ರವೀಣನಾಗಿರುವ ಗೆಳೆಯರು ಇದ್ದರೆ ಇನ್ನೂ ಒಳ್ಳೆಯದು. ಆ ಕ್ಷೇತ್ರದಲ್ಲಿ ಏನೆಲ್ಲಾ ಹೊಸ ವಿದ್ಯಮಾನಗಳು ನೆಡೆಯುತ್ತಿವೆ, ಸೂಚ್ಯಂಕದ ಏಳು ಬೀಳುಗಳನ್ನು ಹೇಳಲು ಗೊತ್ತಿರುವವರು ಇದ್ದರೆ ತುಂಬಾ ಅನುಕೂಲಕರ. ನಿಮಗೆ ಅಂತ ಒಬ್ಬರು ಮೆಂಟರ್ ಅನ್ನು ಗೊತ್ತು ಮಾಡಿಕೊಳ್ಳಿ. ಸಮಾನ ಮನಸ್ಕರ WhatsApp ಗುಂಪು ಸೇರಿದರಂತೂ ಇನ್ನೂ ಒಳ್ಳೆಯದು.


3. Funds ಕಹಾ ಹೈ, ಅಂದ್ರೆ ಊರ್ ತುಂಬಾ ಹೈ
ಹೂಡಿಕೆಯ ವಿಷಯ ಬಂದಾಗ ಅತ್ಯಂತ ಚತುರ ನಿರ್ಣಯವೆಂದರೆ ನಿಮ್ಮ ಉಇತಾಯದ ಹಣವನ್ನು ಹಲವಾರು ಬೇರೆ ಬೇರೆ ಕಡೆಗಳಲ್ಲಿ ತೊಡಗಿಸುವುದು. ಎಲ್.ಐ.ಸಿ., FD-RD ಗಳು, ಅಂಚೆ ಕಚೇರಿ, PPF, Equities, ಹೀಗೆ ಹಲವಾರು ಅನುಕೂಲಕರ ಸೌಲಭ್ಯಗಳಿವೆ. ಈರುಳ್ಳಿ ಬೆಳೆದು, ಬೆಲೆ ಇಳಿದಾಗ ಮಾರುಕಟ್ಟೆಯಲ್ಲಿಯೇ ಬಿಟ್ಟು ಹೋಗುವ ರೈತರ ಪಾಡು ಪೇಪರ್ ನಲ್ಲಿ ಓದಿರುತ್ತೇವೆ. ಈ ರೀತಿ ಬೆಲೆ ಇಳಿಕೆಗೆ ಹಲವಾರು ಕಾರಣಗಳಿದ್ದರೂ ಎಲ್ಲಾ ಹಣವನ್ನು ಒಂದೇ ಬೆಳೆಯಲ್ಲಿ ತೊಡಗಿಸುದ್ದೂ ಕೂಡ ಒಂದು ಕಾರಣವೆನ್ನಬಹುದು. ಈ ಸಿದ್ಧಾಂತವು ಷೇರು ಮಾರುಕಟ್ಟೆಗೂ ಅನ್ವಯಿಸುತ್ತದೆ. ಒಂದೇ ಕಂಪನಿಯ 500 ಷೇರುಗಳನ್ನು ಕೊಳ್ಳುವ ಬದಲು 5 ಬೇರೆ ಬೇರೆ ಕಂಪನಿಗಳ 100 ಷೇರುಗಳನ್ನು ಕೊಳ್ಳುವುದು ಲೇಸು.


4. Only updates I get are updates
ಕಾಲಕ್ಕೆ ತಕ್ಕಂತೆ ವೇಷ, ವೇಷಕ್ಕೆ ತಕ್ಕಂತೆ ಭಾಷೆ ಎಂಬ ಮಾತು ಕೇಳಿರುತ್ತೀರಿ. ನಾವು ಯಾವಾಗಲೂ ಕಾಲದ ಜೊತೆ ಕಾಲು ಹಾಕಿಕೊಂಡು ಸದಾ ಮುನ್ನೆಡೆಯುತ್ತಿರಬೇಕು. ಒಬ್ಬ ಕ್ರಿಯಾಶೀಲಾ ಹುಡಿಕೆದಾರನಿಗೆ ಇರಬೇಕಾದ ಬಹುಮುಖ್ಯ ಗುಣ ಇದು. 2000 ರಲ್ಲಿ Infosys ಷೇರು ಇಷ್ಟಿತ್ತು, ಅದರ ಬೆಲೆ ಈಗ ಇಷ್ಟಾಗಿದೆ. ನೋಡಿದಾ ಷೇರು ಮಾರುಕಟ್ಟೆ ಟ್ರೆಂಡ್ ಹೇಗಿದೆ ಅಂತ ಒಂದಕ್ಕೆ ಎರಡು ಸೇರಿಸಿ ಹೇಳುವವರು ಸುಮಾರು ಜನ ಸಿಗುತ್ತಾರೆ. ಆದರೆ ಸತ್ಯಂ ಹಾಗೂ ಇತರ ಕಂಪನಿಗಳ ಷೇರುದಾರರು ಏನಾದರು ಎಂಬ ಮಾಹಿತಿ ಇಲ್ಲ. ವಿಷಯ ತುಂಬಾ ಸರಳ ಸ್ವಾಮಿ, knowledge is divine, ಷೇರು ಮಾರುಕಟ್ಟೆಯ ವಿಷಯದಲ್ಲಿ ಎಷ್ಟು ತಿಳಿದುಕೊಳ್ಳುವಿರೋ ಅಷ್ಟು ಒಳ್ಳೆಯದು. ಆದ್ದರಿಂದ ಮಾರುಕಟ್ಟೆಯ ಟ್ರೆಂಡ್, pattern ಗಳನ್ನು ಅಧ್ಯಯಿಸುತ್ತಾ ಯಾವಾಗಲೂ update ಆಗುತ್ತಿರಿ.


5. ಅಲ್ಲೇ ಡ್ರಾ, ಅಲ್ಲೇ ಬಹುಮಾನ
ಸಾಮಾನ್ಯವಾಗಿ ಷೇರು ಹೂಡಿಕೆದಾರರಲ್ಲಿ ಎರಡು ವಿಧ:
*
ನಿತ್ಯ ಹೂಡಿಕೆದಾರರು
*
ಧೀರ್ಘ ಹೂಡಿಕೆದಾರರು
ನಿತ್ಯ ಹೂಡಿಕೆದಾರರು ಯಾವಾಗಲೂ ತಮ್ಮ ಗಮನ NIFTY, SENSEX ಸೂಚ್ಯಂಕದ ಮೇಲೆ ಇರುತ್ತದೆ. The Wolf of Wall Street ಚಿತ್ರದಲ್ಲಿ ಕಾಣಬಹುದಾದ seriousness ಇವರಲ್ಲಿರುತ್ತದೆ. ಒಂದೊಂದು ಪಾಯಿಂಟ್ ಏರಿಳಿತದಲ್ಲೂ ಎಷ್ಟು ಲಾಭ ಮಾಡಬಹುದು ಎಂದು ಸದಾ ಲೆಕ್ಕ ಹಾಕುತ್ತಾ buy / sell ವ್ಯವಹಾರಗಳನ್ನು ಮಾಡುತ್ತಿರುತ್ತಾರೆ. ಆ ದಿನದ ಲಾಭ / ನಷ್ಟ ಎಷ್ಟು ಅಂತ ಅವರಿಗೆ ಆ ದಿನದ ಸಾಯಂಕಾಲವೇ ಗೊತ್ತಾಗಿ ಬಿಡುತ್ತದೆ.
ದೀರ್ಘ ಹೂಡಿಕೆದಾರರು ತಮ್ಮ ಉಳಿತಾಯದ ಮೊತ್ತವನ್ನು ತಮ್ಮ ಅತ್ಯಂತ ನಂಬುಗೆಯ ಕಂಪನಿಯಲ್ಲಿ ಹೂಡಿಕೆ ಮಾಡಿ ದೀರ್ಘ ಕಾಲದವರೆಗೆ ಹಾಗೆಯೇ ಬಿಟ್ಟಿರುತ್ತಾರೆ. ಯಾವಾಗಲಾದರೂ ಹಣದ ಅಗತ್ಯ ಬಂದಾಗ ಮಾತ್ರ ಆ ಷೇರುಗಳನ್ನು ನಗದಾಗಿ ಪರಿವರ್ತಿಸಿಕೊಳ್ಳುತ್ತಾರೆ. ಪ್ರತಿ ದಿನವೂ ಷೇರು ಮಾರುಕಟ್ಟೆಯ ಸೂಚ್ಯಂಕಗಳ ಕಡೆ ಗಮನ ಕೊಡಲಾಗದವರು ಈ ಗುಂಪಿಗೆ ಒಳಪಡುತ್ತಾರೆ.
ಈ ಎರಡು ವಿಧಗಳಲ್ಲಿ ನಿಮಗೆ ಯಾವುದು ಅನುಕೂಲಕರವೋ ಆ ವಿಧಾನವಾಗಿ ಹೂಡಿಕೆ ಮಾಡಿ.


6. ತಪ್ಪು ಮಾಡೋದು ಸಹಜ ಕಣೋ
It's okay to make mistakes, but it's a greater mistake not to learn from them ಎಂಬ ಮಾತಿದೆ. ತಪ್ಪು ಎಲ್ಲರಿಂದಲೂ ಆಗುತ್ತದೆ. ಅದರಿಂದ ಪಾಠ ಕಲಿತು ಮುನ್ನಡೆಯಬೇಕು. ಷೇರು ಹೂಡಿಕೆಯಲ್ಲೂ ಒಮ್ಮೊಮ್ಮೆ ಲೆಕ್ಕಾಚಾರಗಳು ಏರುಪೇರಾಗುತ್ತವೆ. ಸೂಚ್ಯಂಕದಲ್ಲಿ ವ್ಯಾಪಕವಾಗಿ ಏರಿಳಿತಗಳಾಗಿ ನಷ್ಟವಾಗುವ ಸಾಧ್ಯತೆ ತುಂಬಾ ಇರುತ್ತದೆ. ಷೇರು ಮಾರುಕಟ್ಟೆಯ ಒಂದು ಉತ್ತಮ ವಿಷಯವೆಂದರೆ ಇಲ್ಲಿ loss limited, profit unlimited. ಆದರೆ ಗಮನಿಸಬೇಕಾದ ಅತಿಮುಖ್ಯ ಅಂಶವೆಂದರೆ ನಷ್ಟವಾದಾಗ ಯಾಕೆ ಎಂದು ಸ್ಥೂಲವಾಗಿ ಅಧ್ಯಯನ ಮಾಡಿ ಮುಂದೆ ಆ ರೀತಿ ಯಡವಟ್ಟಾಗದಂತೆ ಮುನ್ನೆಡೆಯಬೇಕು


 7. Sharing is Caring
Knowledge is divine, ಯಾಕೆ ಗೊತ್ತಾ? ನಿಮ್ಮಲ್ಲಿರುವ ಹಣ ನೀವು ಇನ್ನೊಬ್ಬರಿಗೆ ಕೊಟ್ಟರೆ cut paste ಮಾಡಿದ ಹಾಗೆ. ಆದರೆ ನಿಮ್ಮ ಜ್ಞಾನವನ್ನು ಇನ್ನೊಬ್ಬರೊಂದಿಗೆ ಹಂಚಿಕೊಂಡರೆ ಅದು copy paste ಮಾಡಿದ ಹಾಗೆ, ನಿಮ್ಮಲ್ಲೂ ಇರುತ್ತೆ, ಅವರಲ್ಲೂ ಕೂಡ. ಆದ್ದರಿಂದಲೇ sharing is caring ಎಂದು ಹೇಳಿರುವುದು. ಹೊದಾಗಿ IPO ಬಿಡುಗಡೆಯಾಗುವ ಮಾಹಿತಿ ಇರಬಹುದು, ಅರ್ಧ ವಾರ್ಷಿಕ, ವಾರ್ಷಿಕ ವರದಿ ಬಿಡುಗಡೆ ದಿನಾಂಕ, ಹೊಸ CEO ನೇಮಕ ಇತ್ಯಾದಿಯಾಗಿ ಷೇರು ಮಾರುಕಟ್ಟೆಯಲ್ಲಿ ಸೂಚ್ಯಂಕ ಏರಿಳಿತವಾಗುವ ಸುದ್ದಿ ಗೊತ್ತಾದರೆ ಕೂಡಲೇ ನಿಮ್ಮ ಗೆಳೆಯರಿಗೆ ಹೇಳಿ. A friend in need is a friend in deed ಎಂಬುವಂತೆ ಒಬ್ಬರಿಗೊಬ್ಬರು ಸಹಾಯ ಮಾಡಿದಾಗಲೇ ತಾನೆ ಸ್ನೇಹದ ಬುನಾದಿ ಗಟ್ಟಿಯಾಗುವುದು. ನಿಮಗೆ ಏನಾದರೂ ಗೊತ್ತಾದರೆ ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ, ಅವರಿಗೇನಾದರೂ ಗೊತ್ತಾದಾಗ ಖಂಡಿತಾ ನಿಮಗೆ ತಿಳಿಸುತ್ತಾರೆ.

ನಿಜ ಹೇಳಬೇಕೆಂದರೆ, ಈ ಷೇರು ಮಾರುಕಟ್ಟೆ ರಂಗಕ್ಕೆ ನಾನೂ ಕೂಡ ಹೊಸಬ. ಆದರೆ ನನಗೆ ಗೊತ್ತಿರೋದನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆಂಬ ತವಕದ ಪ್ರತಿಫಲವೇ ಈ ಅಂಕಣ. ಇಷ್ಟು ಓದಿದ್ದೀರಾ, ಇಷ್ಟ ಆದರೆ ಲೈಕ್ ಮಾಡಿ, ಏನಾದರೂ ತಪ್ಪು, ಹೆಚ್ಚಿನ ಮಾಹಿತಿ, ಮೆಚ್ಚುಗೆ ಇದ್ದರೆ ಕಾಮೆಂಟ್ ಮಾಡಿ, ಹಂಗೇ ಮತ್ರೂ ಇಷ್ಟ ಆದರೆ ನಿಮ್ಮ ಆಪ್ತ ವಲಯಕ್ಕೆ ಷೇರ್ ಮಾಡಿ. After all, sharing is caring, ಅಲ್ವಾ??!

ಅಕ್ಟೋಬರ್ 14, 2016

ಎಗ್ಸಾಮು ಹಾಲಿನಲ್ಲಿ ನನ್ನ ಪರಮಾತ್ಮ


ನಮ್ ಬದುಕೇ ಒಂದು ಎಗ್ಸಾಮಿನಂತೆ. ಪಾಸು / ಫೇಲು ನಿರ್ಧರಿಸೋನು ಮೇಲಿದ್ದಾನೆ. ಎಲ್ಲಾ ಬಗೆಯ ಕ್ಲಿಷ್ಟಕರ ಪ್ರಶ್ನೆಗಳಿಗೆ ನಾವು ಸದಾ ಸಿದ್ಧರಾಗೇ ಇರಬೇಕು.
ಏ ನಿಲ್ಸು ನಿಲ್ಸು, ಅವತ್ತು ಬದುಕು ಒಂದು ಲಾಂಗ್ ರೈಡು ಅಂದೆ. ಇನ್ನೊಂದಿನ ಲೈಫು ಒಂಥರಾ ನಾವೇ ಮಾಡಬೇಕಾದ ಅಡುಗೆ ಅಂದೆ. ಇವತ್ತು ಈ ಥರ ಕತೆ ಬಿಡ್ತಾ ಇದ್ದೀಯಾ??!! After all, ಏನಂದ್ಕಂಡಿದ್ದೀಯಾ ಲೈಫು ಅಂದರೆ? ಹಿಂಗೇ ಮಾಡ್ತಾ ಇದ್ದರೆ ಅಣ್ಣಪ್ಪ, a taste of your own medicine ಎಂಬುವಂತೆ ನಿನ್ ಬಗ್ಗೇನೇ ಒಂದು ಬ್ಲಾಗ್ ಅಂಕಣ ಬರೆದು ನಿನಗೇ ಓದುವಂತೆ ಮಾಡಿ ಬಿಡ್ತೀನಿ‌ ಅಂತ ನೀವು ಪೆನ್ನು ಪೇಪರ್ ಕೈಗೆ ತಗೊಳ್ಳುವ ಮೊದಲು ಒಂದು ಮಾತು ಹೇಳಿ ಬಿಡ್ತೀನಿ: ಹೆಂಗೋ ಇಷ್ಟನ್ನೇ ಓದಿದ್ದೀರಂತೆ. ಇದನ್ನೂ ಚೂರು ಮುಗಿಸಿಬಿಡಿ ಅತ್ಲಾಗೆ ಪುಣ್ಯ ಬರುತ್ತೆ.

ಈ ಬಾರಿ ಯಾವುದೇ ಟ್ವಿಸ್ಟು ಟರ್ನುಗಳಿಲ್ಲದೇ ನೇರವಾಗಿ ವಿಷಯ ಪ್ರಸ್ತುತ ಪಡಿಸುತ್ತಿದ್ದೇನೆ. ಈ ಅಂಕಣ ಎಗ್ಸಾಮ್ ಗಳ ಕುರಿತು. ಅಯ್ಯೋ, ಎಗ್ಸಾಮಿಗೆ ಇನ್ನೂ ಒಂದೇ ತಿಂಗಳಿರೋದು ಅಂತ ಜ್ವರ ಬರಿಸಿಕೊಳ್ಳುವ 1st Rank ರಾಜು ಇಂದ ಹಿಡಿದು ಏನು‌ ಎಗ್ಸಾಮಾ? ನಾಳೆ ನಾ? ಸರಿ ಬಿಡು! ಎನ್ನುವ ಗಡ್ಡಪ್ಪನವರೆಗೂ ಎಲ್ಲಾ ಹಂತಗಳಲ್ಲಿ ಜೀವಿಸಿದ್ದೇನೆ ನಾನು. ಆದ್ದರಿಂದ ಎಗ್ಸಾಮ್ ಗಳ ಬಗ್ಗೆ ಬರೆಯಲು ಅತ್ಯಂತ ಸೂಕ್ತವಾದ ವ್ಯಕ್ತಿ ನಾನೇ ಅಂತ ನನ್ನನ್ನು ನಾನೇ ಅವಿರೋಧವಾಗಿ ಆಯ್ಕೆ ಮಾಡ್ಕೊಳ್ತಾ ಇದ್ದೀನಿ. ಈಗಿನ ಪ್ರಜಾತಂತ್ರ ವ್ಯವಸ್ಥೆಯಲ್ಲೇ ಸಿಕ್ಕಾಪಟ್ಟೆ ತೂತು ಇದೆ ಅಂತೆ, ಇಲ್ಲೊಂಚೂರು 'ಮಿಸ್ಟೀಕ್' ಆದರೆ ಏನೂ ಆಗಕಿಲ್ಲ ಬಿಡಿ. ಸರಿ, ಎಲ್ಲಾ ಆಯ್ತು, One fine day, ಬಹಳ ದಿನಗಳಿಂದ ಎಗ್ಸಾಮ್, ಎಗ್ಸಾಮ್ ಅಂತ ತಲೆ ಕೆಟ್ಟು ಗೊಬ್ಬರ ಆಗೋಗಿದೆ. ಹೆಂಗೂ ಈ ಗೊಬ್ಬರದಿಂದ ತಲೆ ಕೂದಲಂತೂ ಬೆಳೆಯೋದಿಲ್ಲ, ಸುಮ್ಕೆ ಯಾಕೆ ಟೆನ್ಶನ್ನು, ಬರೆದು ಬಿಡೋಣ ಅಂತ ಪೇಪರ್ ಪೆನ್ ಹಿಡಿದು ಕುಳಿತುಕೊಂಡೆ‌. ನನ್ ಮಗಂದ್ ಹತ್ತಿರತ್ತಿರ 20 ನಿಮಿಷ ಏನು ಬರಿಬೇಕು ಅಂತ ತೋಚಲೇ ಇಲ್ಲ. ಲವ್ ಮಾಡಿರುವ ಅಥವಾ ಮಾಡ್ತಾ ಇರುವ ನಮ್ ಹುಡುಗರೂ ಕೂಡ ತಮ್ಮ ಮೊದಲ ಪ್ರೇಮ ಪತ್ರ ಬರೆಯಲು ಇಷ್ಟೊಂದು ಸಮಯ ತಗೊಂಡಿರಲ್ಲ‌ ಅಂತ ಅನಿಸುತ್ತಪ್ಪ. ಹೋಗಲಿ ಬಿಡಿ, ಲವ್ ಮಾಡೋರನ್ನ ನಾವ್ಯಾಕೆ ಇಲ್ಲಿ ಡಿಸ್ಟರ್ಬ್ ಮಾಡೋದು? ನಾ ಎಲ್ಲಿದ್ದೆ? , ಎಗ್ಸಾಮ್ ಅಂಕಣ ಅಂತ ಪೆನ್ನು ಪೇಪರ್ ಕೈಲಿ ಹಿಡ್ಕೊಂಡು ಕೂತಾಗ ಹಿಂಗೇ ಬೇಡದಿರೋ ಆಲೋಚನೆಗಳು ಬಂದು, ಬೇಕಿರೋ ಉತ್ತರಗಳು ಹೊಳೆಯಲೇ ಇಲ್ಲ. ಅಗಳಗಳಗಳಗಳೋ, Déjà vu, ಹಿಂಗೇ ಸೇಮ್ ಟು ಸೇಮ್ ಎಗ್ಸಾಮ್ ಹಾಲಿನಲ್ಲಿ blank ಆಗಿ ಕುಳಿತುಕೊಳ್ತಾ ಇದ್ದನಲ್ಲಾ, ಹಂಗೇ ಆಯ್ತಲ್ಲಾ ಗುರುವೇ, ಇದೆಂಥಾ ಕಾಕತಾಳೀಯ ಎಂದೆನಿಸಿತು. ಕಾಲೇಜ್ ದಿನಗಳಲ್ಲಿ ಈ ಥರದ ಎಗ್ಸಾಮ್ ಸಂದರ್ಭಗಳಿಗಾಗಿಯೇ ಅಂತ ನಾನೊಂದು ಟ್ರಿಕ್ಮಾಡಿಕೊಂಡಿದ್ದೆ. ಹೆಚ್ಚು ಕಮ್ಮಿ ಯಾವ ಉತ್ತರವೂ ಹೊಳೆಯದೇ ಇದ್ದರೆ ಪ್ರಶ್ನೆ ಪತ್ರಿಕೆ ಮುಗುಚಾಕಿ (ಉಲ್ಟಾ / ಬೋರಲು ಮಾಡಿ) ಒಂದು ಎರಡು ನಿಮಿಷ ಶಾಂತವಾಗಿ ಕುಳಿತುಕೊಳ್ಳಬೇಕು ಅಂತ. ಎಷ್ಟೋ ಸಲ ಏನೂ ಇಲ್ಲದ ಡಬ್ಬಾ ಪಿಚ್ಚರ್ ಗಳು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುವಂತೆ, ಕೆಲಸಕ್ಕೆ ಬಾರದ ಅಯೋಗ್ಯರೆಲ್ಲಾ CM / PM ಆಗುವಂತೆ, ನಮ್ ಈ ಐಡಿಯಾ ಕೂಡ ಸುಮಾರು ಸಲ work ಆಗ್ತಿತ್ತು. ಅದರನ್ವಯ ಮೂರು ನಾಲ್ಕು ದಿನ ನನ್ನ ಪೆನ್ನು ಪೇಪರ್ ಎಲ್ಲಿಟ್ಟಿದ್ದೀನಿ ಅಂತಲೂ ನೋಡಲಿಲ್ಲ. Let's take a fresh start ಎಂಬುವಂತೆ ಪುನಃ ಅಂಕಣ ಶುರು ಮಾಡಿದೆ. ಹಲವು ಕಥೆಗಳು ನಾ ಮುಂದು ತಾ ಮುಂದು ಅಂತ ನಿಂತಿದ್ದವು.

ಸಾಂದರ್ಭಿಕ ಚಿತ್ರ: ಪ್ರದೀಪ್ ಎಂ ಆಚಾರ್

ನಾನು LKG ಓದಿಲ್ಲ, ಒಂದೇ ಸಲ UKG ಇಂದ ಆಟ ಶುರುವಾಗಿದ್ದು. ಆಗೆಲ್ಲಾ ಎಗ್ಸಾಮುಗಳಿದ್ವಾ ಇಲ್ವಾ ಎಂಬುದರ ಬಗ್ಗೆ ಸ್ಪಷ್ಟವಾಗಿ ನೆನಪಿಲ್ಲ. ನೆನಪಿರೋದು ಮೂರನೇ ಕ್ಲಾಸು. ಆಗಿನ್ನೂ ಹೊಸದಾಗಿ ಮಾಕಮ್ಸ್ ಸ್ಕೂಲ್ ಸೇರಿದ್ದೆ. ಎಲ್ಲವೂ ಹೊಸತು, ಎಲ್ಲರೂ ಹೊಸಬರು. ಸಾಲದ್ದಕ್ಕೆ ಕನ್ನಡ ಮಾಧ್ಯಮದಿಂದ ಇಂಗ್ಲೀಷ್ ಮೀಡಿಯಂಗೆ ವರ್ಗಾವಣೆ. ಒಂದೊಂದು ಸಲ ಆ ಇಂಗ್ಲೀಷ್ ಪಾಠಗಳ ಹೆಸರೇ ನೆನಪಿರುತ್ತಿರಲಿಲ್ಲ. ಶಾಲೆಯಲ್ಲಿ ಹೇಳಿ ಕೊಟ್ಟಿರೋದನ್ನು ಬರೆದು ಕಲಿಯುವ ಹೊತ್ತಿಗೆ ಉಸ್ಸಪ್ಪಎನಿಸುವಂತೆ ಸಾಕಾಗುತ್ತಿತ್ತು. ಮೊದಲೇ ಕನ್ನಡ ಮಾಧ್ಯಮದಿಂದ ಬಂದಿದ್ದರ ಎಫೆಕ್ಟು ಸೇರಿ, ಎಲ್ಲಿ ಫೇಲಾಗಿಬಿಡುತ್ತೇನೋ ಅಂತ ಓದಿದ್ದೇ ಓದಿದ್ದು. ಅದು ಬೇರೆ ಪ್ರಾಥಮಿಕ ಶಾಲೆ ಅಲ್ವಾ, ಹಾಗಾಗಿ 80-90 ಅಂಕಗಳಿಗೆ ಕೊರತೆ ಇರಲಿಲ್ಲ. ಇಂತಿಪ್ಪ ಸಂದರ್ಭದಲ್ಲಿ ನಾನು ಒಂದು ದಿನ ಎಗ್ಸಾಮ್ ಬರೆಯುವಾಗ ಹಾಳೆ ಖಾಲಿಯಾಯಿತು. Additional sheets ತೆಗೆದುಕೊಳ್ಳಬಹುದೆಂಬ ವಿಷಯವೇ ಗೊತ್ತಿರಲಿಲ್ಲ ಆಗ. ಮಿಸ್, ಮಿಸ್, ಪೇಪರ್ ಖಾಲಿ ಆಯ್ತು ಮಿಸ್, ಏನ್ ಮಾಡೋದು ಮಿಸ್ ಅಂತ ಕೇಳಿದೆ. ಆಗ ನಮ್ ಮಿಸ್ ಬಂದವರೇ ಹೆಚ್ಚುವರಿ ಹಾಳೆ ಕೊಟ್ಟು ಹೋದರು. ಇನ್ನೊಂದು ಸೈಡ್ ಮಾಹಿತಿ, ಆಗಲೇ ಒಂದಿಬ್ಬರು ಲೈಟಾಗಿ ನಮ್ ಕ್ರಷ್ ಲಿಸ್ಟ್ಗೆ ಸೇರಿಕೊಂಡಿದ್ದರು. 2 ನಟರಾಜ ಪೆನ್ಸಿಲ್ ಚೆನ್ನಾಗೋ, 3 ಅಪ್ಸರಾ ಪೆನ್ಸಿಲ್ ಚೆನ್ನಾಗೋ ಅಂತ debate ಮಾಡುವ ವಯಸ್ಸಿನಲ್ಲಿ ಕೂಡ ಕ್ರಷ್ ಲಿಸ್ಟ್ಶುರುವಾಗಿತ್ತು ನೋಡಿ. ಆದರೆ ಅವರ ಬಗ್ಗೆ ತೀರಾ ಗಮನ ಹರಿಸುವಷ್ಟು ಇನ್ನೂ ದೊಡ್ಡವನಾಗಿರಲಿಲ್ಲ. ವಿಶೇಷ ಏನೆಂದರೆ ಆ ದಿನ additional paper ತಗೊಂಡೆ ಅಂದ್ನಲ್ಲಾ, ಅವತ್ತು ನಮ್ ಕ್ರಷ್ ಒಬ್ಬಳು ಏನೋ ಅರುಣ ನೀನು?! Additional paper ತಗೊಂಡಾ?!’ ಅನ್ನೋ‌ ಲುಕ್ ಕೊಟ್ಟಿದ್ದಳು. ನಾನು ತೀರಾ 'ಬುದ್ಧಿವಂತ' ಅಂತ ಅವತ್ತು ಆಕೆಗೆ ಅನಿಸಿತ್ತು ಅಂತ ಕಾಣುತ್ತೆ. ಯಾಕೋ ಗೊತ್ತಿಲ್ಲ, ಆ ಕಾಲದಲ್ಲಿ 'ಬುದ್ಧಿವಂತ' ಅನಿಸಿಕೊಳ್ಳುವ ಫೀಲಿಂಗ್ ತುಂಬಾನೇ ಕಿಕ್ ಕೊಡ್ತಾ ಇತ್ತು. ಅದೇ hangover ಅಲ್ಲಿ ಏನೇನೋ ಬರೆದುಕೊಂಡು ಹೆಂಗೆಂಗೋ ಇಸ್ಕೂಲ್ ಪಾಸ್ ಮಾಡಿ ಹೈಸ್ಕೂಲ್ ಅಂಗಳಕ್ಕೆ ಬಂದು ಬಿದ್ವಪ್ಪಾ.


ಸಾಂದರ್ಭಿಕ ಚಿತ್ರ: ಕಾರ್ತಿಕ್ ತಿಪ್ಪೇಶ್

ಒಂದೊಮ್ಮೆ ನಾಗತಿಹಳ್ಳಿ ಚಂದ್ರಶೇಖರ್, ಸುನೀಲ್ ಕುಮಾರ್ ದೇಸಾಯಿ, ಶಿವಮಣಿ ಇವರೆಲ್ಲಾ 100 days, 200 days, ಓಡಿದಂತ ಹಿಟ್ ಚಿತ್ರಗಳನ್ನು ನೀಡಿದ್ದಾರೆ. 2010 ರ ನಂತರ ಅವರ ಯಾವುದೇ ಚಿತ್ರಗಳು ಜನರ ಮನದಲ್ಲಿ ಉಳಿಯೋದಿರಲಿ, ಅವರ ಚಿತ್ರಗಳು ಬಂದವು ಅಂತ ಹಲವರಿಗೆ ಗೊತ್ತೇ ಆಗಲಿಲ್ಲ. No offense to these people, honestly. ಹೈಸ್ಕೂಲಿಗೆ‌ ಬಂದು ನಮ್ ಕಥೆ ಕೂಡ ಹಿಂಗೇ ಆಗಿತ್ತು. ಒಂದು ಕಾಲದಲ್ಲಿ ಸಲೀಸಾಗಿ 1st Rank ಬರುತ್ತಿದ್ದ ನಾನು 1st Class ನಲ್ಲಿ ಪಾಸ್ ಮಾಡಲು ಕೂಡ ಪರದಾಡುವಂತಾಯಿತು. Science, Maths ಮೂರು ಭಾಗಗಳಾಗಿ, ಇನ್ನೂ Social Studies ನಾಲ್ಕು ಭಾಗಗಳಾಗಿ survive ಆಗೋದೇ ದುಸ್ತರವಾಯಿತು. ಮತ್ತು ಆಗ ಬೇರೆ ನಿಧಾನಕ್ಕೆ ಹೃದಯ ಪರ ಪರ ಕೆರೆದುಕೊಳ್ಳಲು ಅಣಿಯಾಗಿ ಫೀಲ್ಡ್ಗೆ ಬೇರೆ ಇಳಿದಿದ್ವಿ. ಎಲ್ಲಾ ಮಿಕ್ಸ್ ಆಗಿ ಎತ್ಲಾಗೆ ಪಲ್ಟಿ ಹೊಡೆದರೂ ಅಂಕಗಳು 70 ದಾಟುತ್ತಿರಲಿಲ್ಲ. ಸರಿ ಬಿಡಪ್ಪ, ಶಿವ ಇಟ್ಟಂಗೆ ಆಗುತ್ತೆ ಅಂತ ಆಗಿಂದ ನಾನು ಓದಿನ ಬಗ್ಗೆ expectations ಬಿಟ್ಟು ಬಿಟ್ಟೆ. ಪ್ರಯತ್ನ ನೀನು ಮಾಡು, ಫಲದ ಚಿಂತೆ ನನಗೆ ಬಿಡು ಅಂತ ಶ್ರೀ ಕೃಷ್ಣ ಹೇಳಿರುವಂತೆ ಎಷ್ಟಾಗುತ್ತೋ ಅಷ್ಟು ಓದೋದಪ್ಪಾ, ಫೇಲಾದರೆ ತಪ್ಪು ನಮ್ದಾ ಅಪ್ಪಾ?” ಅನ್ನೋದೇ‌ ನಮ್ ಘೋಷವಾಕ್ಯವಾಯಿತು.



ಸಾಂದರ್ಭಿಕ ಚಿತ್ರ: ನಾಗೇಂದ್ರ 'ಶಾಕ್'

PUC ಅಂದರೆ Please U, C ಅಂತ ಒಂದು ಪಿಚ್ಚರ್ ಬಂದಿತ್ತು. PUC ಓದುವಾಗ ಹೆಚ್ಚು ಕಮ್ಮಿ ನಮ್ಮ ಮನಸ್ಥಿತಿ ಕೂಡ ಅದೇ ಆಗಿತ್ತು ಅನ್ನಿ. ಬೆಳಿಗ್ಗೆ ಬೆಳಿಗ್ಗೆ 6.15am ಗೆ ಶುರುವಾಗುತ್ತಿದ್ದ ಟ್ಯೂಷನ್ ಗೆ 5 ಗಂಟೆಗೇ ಎದ್ದು, ಸ್ನಾನ ಮಾಡಿ ರೆಡಿ ಆಗಿ, ಸೈಕಲ್ ತುಳಿದುಕೊಂಡು ಹೋಗುತ್ತಿದ್ದೆ. ಮನೆಯಿಂದ ಟ್ಯೂಷನ್, ಅಲ್ಲಿಂದ ಕಾಲೇಜ್, ಕ್ಲಾಸ್ ಮುಗಿಸಿ ಮತ್ತೆ ಎರಡು ಟ್ಯೂಷನ್, ಎಲ್ಲಾ ಮುಗಿಸಿ‌ ಕೊನೆಗೆ ಮನೆಗೆ, ಹೀಗೆ ಅಲ್ಲಿಂದಿಲ್ಲಿಗೆ, ಇಲ್ಲಿಂದಲ್ಲಿಗೆ ಸೈಕಲ್ ತುಳಿದಿದ್ದಕ್ಕಿಂತ PUC ಪಾಸ್ ಮಾಡಲು ಸೈಕಲ್ ಹೊಡೆದಿದ್ದೇ ಜಾಸ್ತಿ ಎನ್ನಬಹುದು. ಅತ್ತ Differentiation - Integration, ಇತ್ತ Organic / Inorganic Chemistry. ಒಂದು ಕಡೆ Geometrical Optics, ಇನ್ನೊಂದು ಕಡೆ Botany / Zoology. ನಾಲ್ಕೂ ದಿಕ್ಕಿನಿಂದ ನಾಲ್ಕು‌ ಸಬ್ಜೆಕ್ಟ್ ಗಳು ಒತ್ತರಿಸಿಕೊಂಡು ಬಂದು ಯಾವುದು ಓದೋದು, ಯಾವುದು ಬಿಡೋದು ಅನ್ನೋ ಹಂಗಾಗಿತ್ತು. ಜೊತೆಗೆ ನಮ್ ಕಾಲೇಜ್ ಹುಡುಗಿಯರನ್ನು ನೋಡುತ್ತಾ ನಿಲ್ಲುವ ಎಕಸ್ಟ್ರಾ ಜವಾಬ್ದಾರಿಬೇರೆ. ಇಷ್ಟೆಲ್ಲದರ ಮಧ್ಯ PUC Mid Term ಎಗ್ಸಾಮಿನಲ್ಲಿ ಒಂದು ದಿನ, ಏನು ಬರೆಯೋದು ಅಂತ ಗೊತ್ತೇ ಆಗದೇ ಗೋಡೆ ನೋಡುತ್ತಾ ಕಾಲ ಕಳೆದೆ. ನನ್ನ ಬದುಕಿನ One of the longest hours ಎನ್ನುವಂಥ ಫೀಲ್ ಆಗಿದ್ದು ಆ ದಿನ. ಹೋಯ್ತು, ಎಲ್ಲಾ ಹೋಯ್ತು ಅಂತ ವಿಧಿಯಿಲ್ಲದೆ ಎದ್ದು ಬಂದಿದ್ದ ಆ ಮಟ್ಟದ disastrous ಪೇಪರ್ ಗೆ 4 ಮಾರ್ಕ್ಸ್ ಬಂದಿದ್ದು ನೋಡಿ ನಗುವುದೋ ಅಳುವುದೋ ನೀವೇ ಹೇಳಿ ಎನ್ನುವಂತಾಗಿತ್ತು. ಸಾಕಪ್ಪ ಪಿಯುಸಿ ಮುಗಿಸಿಕೊಂಡು ಆಚೆ ಹೋದರೆ ಸಾಕು ಅಂತ ಓದಲು ಸೈಕಲ್ ತುಳಿದು ಹೆಂಗೋ JNNCE ತೀರವನ್ನು ತಲುಪಿದ್ದೆ.


ಸಾಂದರ್ಭಿಕ ಚಿತ್ರ: ತಿಲಕ್ ಶಿವಾಜಿ 

Engineering ಶುರುವಿನಲ್ಲೇ Happy Days ಚಿತ್ರ ನೋಡಿ, ಓಹೋ Engineering ಅಂದರೆ ಹೀಗೆಲ್ಲಾ ಇರುತ್ತಾ ಅಂದ್ಕೊಂಡು ಖುಷಿಯಾಗಿ ತುಂಗಾ ಹಾಸ್ಟೆಲ್ ಸೇರಿಕೊಂಡಿದ್ವಿ. ಆಮೇಲೆ ಗೊತ್ತಾಯ್ತು, ಮೂರು ಲೋಕ ಪಲ್ಟಿ ಹೊಡೆದು ಬಂದರೂ ಮೆಕ್ಯಾನಿಕಲ್ ಬ್ರ್ಯಾಂಚ್ ನಲ್ಲಿ ತಮನ್ನಾ ಥರ ಸಹಪಾಠಿ ಸಿಗೋದು ಪಕ್ಕಕ್ಕಿರಲಿ, ನಮ್ ಕೈ ಬೆರಳುಗಳಿಗಿಂತ ಹೆಚ್ಚು ಸಂಖ್ಯೆಯ ಹುಡುಗಿಯರಿದ್ದರೆ ಅದೇ ಹೆಚ್ಚು ಅಂತ. Jokes aside, Mechanical Branch ಒಂಥರಾ Boys College, ಸಿನಿಮಾ Crew, Royal Enfield Bike Riders, Army Camp ನ ಹಾಗೆ. ಎಲ್ಲಾ ಬರೀ ಹುಡುಗರೇ ಇರೋದರಿಂದ, ನಮ್ಮ ನಮ್ಮಲ್ಲಿ ಅದೇನೋ ಒಂದು ಬಗೆಯ ಸ್ಟ್ರಾಂಗ್ ಬಾಂಧವ್ಯ ಮೂಡಿರುತ್ತದೆ, ಓನ್ಲಿ ಸಿಂಗಲ್ ಮೀನಿಂಗ್. ಅದೇನೇ ಆದರೂ, ಸ್ಕೂಲು, ಕಾಲೇಜು, ಆಫೀಸು, ಬಸ್ / ರೈಲು ಪ್ರಯಾಣಗಳಲ್ಲಿ ಹುಡುಗಿಯರು ಇದ್ದರೆ ಅದರ ರಂಗೇ ಬೇರೆ. ಅದೇ ಕಾರಣಕ್ಕೆ, ನಾವೋ, ಮಠ ಚಿತ್ರದ ಶಶಿಧರ ಭಟ್ಟರ ಥರ ನಮ್ಮದಲ್ಲದ ಹುಡುಗಿಯರೆಲ್ಲಾ ನಮ್ ಹುಡುಗಿಯರೇ ಅಂತ Ad Block, CS Block, ಕ್ರಿಕೆಟ್ ಫೀಲ್ಡು, ಕ್ಯಾಂಟೀನ್ ಹತ್ತಿರ, ಬಸ್ ಶೆಲ್ಟರ್ ಹೀಗೆ, ಸಿಕ್ಕ ಸಿಕ್ಕ ಜಾಗದಲ್ಲಿ ಒನ್ ಸೈಡ್ ಲವ್ ಶುರು ಹಚ್ಕೊಂಡಿದ್ವಿ. Brainy is the new sexy ಅಂತ ಚೆನ್ನಾಗಿರೋ ಪ್ಲಸ್ ಯರ್ರಾಬಿರ್ರಿ ಓದುವ ಹುಡುಗಿಯರು ಸಿಗಬಹುದು ಅಂತ ಲೈಬ್ರರಿಗೆ ಹೋಗಿದ್ದೂ ಇದೆ!! ಓ ಸಾರಿ, ಇಂಜಿನಿಯರಿಂಗ್ ಎಗ್ಸಾಮ್ ಗಳ ಬಗ್ಗೆ ಅಂತ ಹೊಸ ಪ್ಯಾರಾ ಶುರು ಮಾಡಿದೆ, ನೋಡಿದರೆ ಬೇಡದ ವಿಷಯಗಳೇ ಹೇಳಿಬಿಟ್ಟೆ. ಇರಲಿ ಬಿಡಿ, ಅಂತ ವ್ಯತ್ಯಾಸ ಏನೂ ಆಗಲಿಲ್ಲ, ನಮ್ ಉತ್ತರ ಪತ್ರಿಕೆ ಕೂಡ ಹೀಗೇ ಇರುತ್ತೆ, ಅಲ್ಲಿ ಬೇಕಿದ್ದಕ್ಕಿಂತ, ಬೇಡದ್ದೇ ಹೆಚ್ಚು.



ಎಗ್ಸಾಮು ಹಾಲಿನಲ್ಲಿ ನನ್ನ ಪರಮಾತ್ಮ,
ಮಾರ್ನಿಂಗು ಷೋಗೆ ಹೋಗು ಕಂದ ಅಂತಾನೆ
ಸಾಂದರ್ಭಿಕ ಚಿತ್ರ: ಪರಮಾತ್ಮ

ಕಾಲೇಜು ಲೈಫಲ್ಲಿ ಇಷ್ಟೆಲ್ಲಾ ಹಗರಣಗಳು ಆದರೆ ಏನಾಗುತ್ತೆ? ಭಾಗಶಃ ಎಗ್ಸಾಮ್ ಗಳು ಅಷ್ಟ್ರಲ್ಲೇ ಜಸ್ಟ್ ಪಾಸು, ಕೆಲವು ಪಾಸು, ಮತ್ತೆ‌ ಕೆಲವು ಫೇಲು. ಇಂಜಿನಿಯರಿಂಗ್ ಓದಿರುವ ಯಾರಿಗೇ ಆದರೂ ಪ್ರತಿ ಸೆಮಿಸ್ಟರ್ ನಲ್ಲಿ ಒಂದು ಅಥವಾ ಎರಡು - ಮೂರು deadly subject ಇರುತ್ತೆ ಅನ್ನೋ ವಿಷಯ ಗೊತ್ತೇ ಇರುತ್ತೆ. BTD, ATD, MOM, DOM, KOM, HMT, Design 1, Design 2, ಇತ್ಯಾದಿಯಾಗಿ ಹೆಸರು ಕೇಳಿದರೆ ನಡುಕ ಹುಟ್ಟುವಂಥ ಸುಮಾರು subject ಗಳು ನಮಗೂ ಇದ್ದವು. ಎಲ್ಲಾ ಬಿಟ್ಟು ನಾವು TechZone, MEA, ಚಿರಂತನ ಅಂತ ಓಡಾಡೋದರಲ್ಲಿ, ಕಿರು ಚಿತ್ರಗಳನ್ನು ಮಾಡೋದರಲ್ಲಿ, ‘ಚಿತ್ರ-ಕಥೆಗಳನ್ನು ಎಡಿಟ್ ಮಾಡೋದರಲ್ಲಿ full busy. ನಮ್ ಎಂಜಿನಿಯರಿಂಗ್ ಬದುಕನ್ನು ಅಂಕಿಗಳಲ್ಲಿ ವರ್ಣಿಸೋದಾದರೆ 35+15=50 ಎನ್ನಲಡ್ಡಿಯಿಲ್ಲ. ಕ್ಲಾಸಿನ ಅಟೆಂಡೆನ್ಸ್ ಗಿಂತ ವೀರಭದ್ರೇಶ್ವರ, ಮಲ್ಲಿಕಾರ್ಜುನ, HPC, ಲಕ್ಷ್ಮಿ, ಮಾಡರ್ನ್, ಮಂಜುನಾಥ ಟೇಟ್ರುಗಳಲ್ಲೇ ನಮ್ ಹಾಜರಿ ತುಸು ಜಾಸ್ತಿ ಇತ್ತು ಎನ್ನಬಹುದು. ಇದೆಲ್ಲದರ ಸೈಡ್ ಎಫೆಕ್ಟ್ ಎಂಬುವಂತೆ
ಎಗ್ಸಾಮು ಹಾಲಿನಲ್ಲಿ ನನ್ನ ಪರಮಾತ್ಮ,
ಮಾರ್ನಿಂಗು ಷೋಗೆ ಹೋಗು ಕಂದ ಅಂತಾನೆ
ಎಂಬುವ ಭಟ್ಟರ ಸಾಲುಗಳು ನಮಿಗೋಸ್ಕರನೇ ಬರೆದಿದ್ದಾರೇನೋ ಅನಿಸುತ್ತಿತ್ತು. ಯಾವಾಗಲೂ ಮಜಾ ಮಾಡ್ತಾ ಇರಬೇಕು ಅಂದರೆ ಆಗಲ್ವಲ್ಲಾ, ಅದಿಕ್ಕೆ ಎಗ್ಸಾಮ್ ಬಂತೆಂದರೆ ಎಂಟರ್ಟೈನ್ಮೆಂಟ್ ಸನ್ಯಾಸ ತೆಗೆದುಕೊಳ್ತಾ ಇದ್ವಿ. ಒಂದು ಕಡೆ ಇಂದ ಎಲ್ಲಾ ಬಂದ್, ಉಸಿರಾಡೋಕೆ ಎಷ್ಟು ಬೇಕೋ, ಅಷ್ಟು ಮಾತ್ರ ಎಂಟರ್ಟೈನ್ಮೆಂಟ್. ಪರಿಸ್ಥಿತಿ ಹೀಗಿದ್ದಾಗ ಎಗ್ಸಾಮ್ ನಲ್ಲಿ ಏನಾದರೂ ಹಗರಣಮಾಡದೇ ಇರುತ್ತಿದ್ವಾ? I mean, ಕಾಪಿ ಹೊಡೆಯೋದು, ಚಿಟ್ಸ್ ಇಡೋದೆಲ್ಲಾ ಅಲ್ಲಾ, ಸುಕ್ಕಾ ಸೂರಿ ಸ್ಟೈಲಲ್ಲಿ ಹೇಳೋದಾದರೆ ಲಲಿತಕಲೆಗಳು ಲಯಬದ್ಧವಾಗಿ ಸಾಗುತ್ತಿದ್ದವು. ನಮ್ ಕಾಲೇಜಿನ ಕ್ಲಾಸ್ ರೂಮ್ ಗಳ ಇನ್ನೊಂದು ವಿಶೇಷತೆ ಏನೆಂದರೆ ಮೇಷ್ಟ್ರುಗಳು ಪಾಠ ಮಾಡಲು ಬೋರ್ಡ್ ಕೆಳಗೆ ನೆಲದ ಮೇಲೆ ಅರ್ಧ ಅಡಿ ಎತ್ತರ ಕಟ್ಟೆ ಇತ್ತು. ಜಾಗ ಉಳಿಸಬೇಕು ‌ಅಂತ ಅಲ್ಲಿ‌ ಕೂಡ ಒಂದು ಬೆಂಚ್ ಹಾಕುತ್ತಿದ್ದರು. ಗ್ರಹಾಚಾರ ಸರಿ‌ ಇಲ್ಲದ ಒಬ್ಬನು ಎಗ್ಸಾಮ್ ಹಾಲ್ ನಲ್ಲಿ 'ಗೋಡೆ-ಭಾಗ್ಯ ಯೋಜನೆಯ ಫಲಾನುಭವಿ.


ಎಲ್ಲ ಬಿಟ್ಟು ಹಿಮಾಲಯಕ್ಕೆ ಹೋಗಿ ಹಿಂಗೇ ಉಲ್ಟಾ ನಿಂತ್ಕೊಂಡು ಬಿಡ್ಲಾ?!
ಸಾಂದರ್ಭಿಕ ಚಿತ್ರ: ಸಚಿನ್ 'ಗ್ಯಾಪ್' ಕುಮಾರ್ 

ನಾನು ಯಾವಾಗಲೂ ನನಗೆ ಎಷ್ಟು ಗೊತ್ತಿದೆಯೋ ಅಷ್ಟು ಬರೆದು ಆದಷ್ಟು ಬೇಗ ಎದ್ದು ಬರುತ್ತಿದ್ದೆ. ಆಮೇಲೆ ನಮ್ ದೂಧ್ ಅರುಣಹೇಳಿದಾಗಿಂದ ಬರೆಯೋದು ಏನಾದರೂ ಇರಲಿ, ಇಲ್ಲದಿರಲಿ, ಮೂರು‌ ಗಂಟೆ ಮುಗಿದ ಮೇಲೆ ಮಾತ್ರ ಆಚೆ ಬರಬೇಕು ಅಂತ ಅಲ್ಲೇ ಗೋಡೆ, ಗಡಿಯಾರ, ಬೋರ್ಡು ನೋಡ್ಕೊಂಡು ಕುಳಿತಿರುತ್ತಿದ್ದೆ. ನಾವು ಕಾಪಿ ಹೊಡಿಬಾರದು‌ ಅಂತ ಒಂದು ಬೆಂಚಲ್ಲಿ ಇಬ್ಬರನ್ನು ಮಾತ್ರ ಕೂರಿಸುತ್ತಿದ್ದರು. EC, EEE, TC similar branch ಗಳು. ಆದ್ದರಿಂದ ಸಿಕ್ಕಾಪಟ್ಟೆ ತಲೆ ಓಡಿಸಿ ಯಾವಾಗಲೂ irrelevant branch ವಿದ್ಯಾರ್ಥಿಗಳು ಪಕ್ಕ‌ ಬರುವಂತೆ seating arrangement ಮಾಡುತ್ತಿದ್ದರು. ನಮ್ ಪುಣ್ಯಕ್ಕೆ ಯಾವಾಗಲೂ CS, IS, EC ಬ್ರ್ಯಾಂಚ್ ಹುಡುಗ, ಹುಡುಗಿಯರು ಪಕ್ಕದಲ್ಲಿ ಸಿಗುತ್ತಿದ್ದರು. ಬೇರೆ ಬ್ರ್ಯಾಂಚ್ ಹುಡುಗಿಯರು ಪಕ್ಕ ಬಿದ್ದರೆ ಮುಗೀತು, Prestige ವಿಷಯ, ನಮಿಗೆ ಎಗ್ಸಾಮಲ್ಲಿ ಏನೂ ಬರಲ್ಲ ಅಂತ ಅವರಿಗೆ ಗೊತ್ತಾಗಬಾರದು ಅಲ್ವಾ? ಅದಿಕ್ಕೆ ಏನೇನೋ ಬರೆಯುತ್ತಲೇ ಇರೋರ ಥರ ಡವ್ ಮಾಡ್ಕೊಂಡು, ನಮ್ಮದು ಬರೆಯೋದು ಏನೇನಿದೆಯೋ ಎಲ್ಲಾ ಬೇಗ ಮುಗಿಸಿ ಕ್ಲಾಸ್ ರೂಮಲ್ಲಿ‌ ಇರುತ್ತಿದ್ದ ಹುಡುಗಿಯರನ್ನು ನೋಡ್ಕೊಂಡು ಕುಳಿತಿರುತಿದ್ವಿ. ಹಾಗೆಯೇ ಮನದ ಬ್ಯಾಕ್ ಗ್ರೌಂಡಲ್ಲಿ
ಓದ್ಕೊಂಡು, ಓದ್ಕೊಂಡು, ಓದ್ಕೊಂಡಿರು,
ಡೌಟಿದ್ರೆ ಹುಡುಗೀರ್ ನ ಕೇಳು ಗುರೂ

ಸಾಲುಗಳು ರಿಪೀಟ್ ಆಗ್ತಿದ್ವು. ನಮ್ ಹುಡುಗ ಒಬ್ಬ Life is really about making memories now and revising it later” ಎಂಬ WhatsApp status ಹಾಕಿದ್ದ. ಅದರ ಬಗ್ಗೆಯೇ ಯೋಚಿಸುತ್ತಾ ಕುಳಿತಾಗ, ಏನಪ್ಪಾ ನಮ್ದುಕೆ ಎಗ್ಸಾಮ್ ಹಾಲ್ ನಲ್ಲಿ ಕೂಡ 'ಈಟೊಂದು' ನೆನಪುಗಳಿವೆ ಅಂತ ಸೋಜಿಗವೆನಿಸಿತು.

ಸಾಕು ಬಿಡಪ್ಪಾ ಎಲ್ಲೋ ಒಂದು ಕಡೆ ಕೆಲಸ ಸಿಕ್ಕಿದೆ, ಹೀಗೆ ಆರಾಮಾಗಿ ಇದ್ದು ಬಿಡೋಣ ಅಂತ
ಹೇಳ್ಕೊಳ್ಳೋಕ್ ಒಂದ್ ಊರು,
ತಲೆ ಮ್ಯಾಗೆ ಒಂದು ಸೂರು,
ಮಲಗಾಕೆ ಭೂಮ್ ತಾಯಿ ಮಂಚ,
ಕೈ ಹಿಡಿದೋಳ್ ಪುಟ್ನಂಜಿ,
ನಗ್ ನಗ್ತಾ ಉಪ್ಗಂಜಿ,
ಕೊಟ್ರಾಯ್ತು ರತ್ನನ್ ಪರ್ಪಂಚ

ಎಂದು ಹಾಡು ಗುನುಗುವುದರೊಳಗೆ ಯಮಹಾ Fz ಬೈಕ್ ಬೇಕು, ಸೋನಿ ಟಿವಿ ಬೇಕು, ಗೂಗಲ್ ಪಿಕ್ಸೆಲ್ ಫೋನ್ ಬೇಕು, ಅದು ಬೇಕು, ಇದು ಬೇಕು, ಬೇಕು ಬೇಕು ಬೇಕು ಅನ್ನೋ ಬೇಕೂಫಾನೇ ನಾನು ಅಂತ ಪ್ರಮೋಷನ್ ಎಗ್ಸಾಮ್ ಗಳಿಗೆ, Competitive Exam ಗಳಿಗೆ ತಯಾರಿ ನೆಡಿಸಿದ್ದೀನಿ. ಹೀಗೆ ಒಂದು ಎಗ್ಸಾಮ್ ಗೆ ಅಂತ ಮೊನ್ನೆ ರಾಜಧಾನಿಗೆ ರೈಲಲ್ಲಿ ಹೊರಟಾಗ, ಓದುವುದನ್ನು ಬಿಟ್ಟು, ಹಿಂದೆ ಓದದೇ ಏನೆನೆಲ್ಲಾ ಮಾಡಿದೆ ಅನ್ನೋದನ್ನು ಬರೆದಿರುವೆ. ನಗುವುದೋ ಅಳುವುದೋ moment again for me. ಇದನ್ನೆಲ್ಲಾ ಓದಿ, ನಿಮಗೂ ನಿಮ್ ಶಾಲಾ / ಕಾಲೇಜು ನೆನಪುಗಳು ಉಮ್ಮಳಿಸಿ ಬಂದಿದ್ದರೆ‌ ಮೆಸೇಜ್ ಮಾಡಿ, ಕೆಲ ಕಾಲ ಹರಟೆ ಹೊಡೆಯೋಣ. Appraisal, Competitive Exam Preparation, ಇಂಥವೇ ಏನಾದರೂ ಇದ್ದರೆ, ಚೆನ್ನಾಗಿ prepare ಆಗಿ, All the best. ಹಂಗೂ ಏನಾದರೂ ಡುಮ್ಕಿ‌ ಹೊಡೆದರೆ, ಹೋಗ್ಲಿ ಬಿಡಿ, ನಮ್ ಭಟ್ಟರ ಕೆಳಗಿನ ಸಾಲುಗಳನ್ನು ಓದಿ, ಮತ್ತೆ ತಯಾರಿ ಶುರು ಮಾಡ್ಕೊಳ್ಳಿ.
ಫೇಲಾಗದವರುಂಟೇ ಚೊಂಬೇಶ್ವರ,
ಪಾಸಾಗಿ ಏನ್ ಮಾಡ್ಲಿ ಒಂದೇ ಸಲ”.