ಸೆಪ್ಟೆಂಬರ್ 24, 2015

ಒಂದು ಕುತೂಹಲಕಾರಿ...

ಉಪ್ಪಿ 2 ಚಿತ್ರ ಬಿಡುಗಡೆಯಾಗಿ ಆಗಲೇ ಒಂದು ತಿಂಗಳಾಗಿದೆ. ಆದರೆ ಅದರ ಹ್ಯಾಂಗ್ ಓವರ್ ನನಗಿನ್ನೂ ಇಳಿದಿಲ್ಲ. ತಿಂಡಿಗೆ ಅಂತ ಹೋಟೆಲ್ ಗೆ ಬಂದು ಮೆನು ಬೋರ್ಡ್ ಮೇಲೆ ಕಣ್ಣಾಡಿಸಿದಾಗ ಚೌಚೌಬಾತ್ ಇತ್ತು, ಕೇಸರಿ ಬಾತ್ ಇತ್ತು, ಆದರೆ ಕಾರಾಬಾತ್ ಯಾನೆ ಉಪ್ಪಿಟ್ಟು ಇರಲಿಲ್ಲ. ಕೇಸರಿಬಾತ್ ಇದೆ, ಉಪ್ಪಿಟ್ಟು ಇಲ್ಲದೇ ಚೌಚೌ ಬಾತ್ ಕೊಡೋಕೆ ಹೇಗೆ ಸಾಧ್ಯ ಅಂತ ಮನಸ್ಸಲ್ಲೇ ಲೆಕ್ಕಾಚಾರ ಹಾಕಿ ಉಪ್ಪಿಟ್ಟು ಆರ್ಡರ್ ಮಾಡಿದೆ. ಉಪ್ಪಿಟ್ಟು ಬರೋದ್ರೊಳಗೆ ನಾಳೆ ಬಕ್ರೀದ್ ಹಬ್ಬಕ್ಕಾಗಿ ರಜಾ ಇರೋದು ನೆನಪಾಗಿ "ಕಣ್ಣು ಮುಂದೆ ಉಪ್ಪಿಟ್ಟು ಇಟ್ಕೊಂಡು ನಾಳೆ ಬಿರಿಯಾನಿ ಸಿಗುತ್ತಾ ಅಂತ ಯೋಚನೆ ಮಾಡೋರ ಬಾಳೆಲ್ಲಾ ಬೌ ಬೌ ಬಿರಿಯಾನಿಯೇ" ಅಂತ ಒಂದ್ ಲೈನ್ ತಲೆಯಲ್ಲಿ ಬಂತು. ಸರಿ ಅದನ್ನೇ ಪೋಸ್ಟ್ ಮಾಡೋಣ ಅಂತ ಮೊಬೈಲ್ ತೆಗೆದು ಟೈಪಿಸುತ್ತಾ ಇದ್ದೆ. ಅಷ್ಟರಲ್ಲಿ ಮಾಣಿ ಟೇಬಲ್ ಮೇಲೆ ಉಪ್ಪಿಟ್ಟು ತಂದಿರಿಸಿದಾಗ ನಾನಿನ್ನೂ ಮೊಬೈಲನ್ನೇ ನೋಡುತ್ತಿದ್ದೆ. ಟೈಪ್ ಮಾಡೋದನ್ನು ಅರ್ಧಕ್ಕೆ ನಿಲ್ಲಿಸಿ ಕ್ಯಾಮೆರಾ ಆನ್ ಮಾಡಿ ಮೊಬೈಲಲ್ಲಿ ನೋಡ್ತೀನಿ, ತಟ್ಟೆ ಇದೆ, ಆದರೆ ಉಪ್ಪಿಟ್ಟೇ ಇಲ್ಲ! ಅರೇ ಇಸ್ಕಿ, ಖಾಲಿ ತಟ್ಟೆ ಏನಾದ್ರೂ ತಂದಿಟ್ಟರಾ ಇವರು ಅಂತ ಕನ್ನಡಕ ಹಾಕ್ಕೊಂಡು ನೋಡಿದೆ, ಅಲ್ಲಿ ಉಪ್ಪಿಟ್ಟು ಶಾಂತವಾಗಿ ಕುಳಿತಿತ್ತು. "Oh yeah, there it is!" ಅಂತ ಅಂದ್ಕೊಂಡು ತಿನ್ನೋಕೆ ಶುರು ಮಾಡಿದೆ. ಡಯೆಟ್ ಮಾಡುತ್ತಿರುವ ಗುಬ್ಬಿ ಮರಿಗೂ ಇಷ್ಟು ಉಪ್ಪಿಟ್ಟು ಸಾಕಾಗಲ್ಲ ಇನ್ನು ನಮ್ ಕಥೆ ಏನು ಅಂತ ಅಂದ್ಕೊಳ್ಳುತ್ತಿರುವಾಗಲೇ "ಬಕಾಸುರನ ಬಾಯಿಗೆ ಹನಿ ಮಜ್ಜಿಗೆ ಬಿಟ್ಟಂಗಾಯ್ತು" (ಸರಿಯಾದ ವಾಕ್ಯ ನನಗೂ ಗೊತ್ತಿಲ್ಲ, ನಿಮಗೇನಾದರೂ ತಿಳಿದಿದ್ದರೆ ಹೇಳಿ) ಅನ್ನೋ ಸಾಲು ನೆನಪಾಗಿ ಬೇರೆ ಏನಾದ್ರೂ ತಿನ್ನಲೇಬೇಕು ಇಲ್ಲಾಂದ್ರೆ ಕಷ್ಟ ಆಗುತ್ತೆ ಅಂತ ಅಂದ್ಕೊಂಡು ಬಿಲ್ ಪಾವತಿಸಿ ಆಫೀಸಿಗೆ ಬಂದು ಕುಳಿತೆ. ಕಂಪ್ಯೂಟರ್ ಆನ್ ಆಗುವುದರೊಳಗೆ ಹೀಗೊಂದು ಯೋಚನೆ ಬಂತು.




ಸಾಂದರ್ಭಿಕ ಚಿತ್ರ: ಪ್ರದೀಪ್ ಎಂ ಆಚಾರ್


ಜಗತ್ತಲ್ಲಿ ಕೋಟ್ಯಾಧಿಪತಿಗಳೂ ಇದ್ದಾರೆ, ಊಟಕ್ಕೆ ಏನೂ ಇಲ್ಲದೆ ಸತ್ತವರೂ ಇದ್ದಾರೆ, ನಡುವಲ್ಲಿ ಮನೆ ಬಾಡಿಗೆ ಬಿಲ್, ಕರೆಂಟ್ ಬಿಲ್, ಮೊಬೈಲ್ ಬಿಲ್, ಕ್ರೆಡಿಟ್ ಕಾರ್ಡ್ ಬಿಲ್ ಗಳೆಂಬ ಹಲವು 'ಬಿಲ್ಲು' ಇರದ 'ಬಾಣ'ಗಳಿಂದ ತಿವಿಸಿಕೊಂಡು ನಾನು ಹೆಂಗೋ ಜೀವನ ತಳ್ಳುತ್ತಾ ಇದ್ದೀನಪ್ಪಾ. 20 ಸಾವಿರ ಸಂಬಳದವನಿಗೆ  "ಏನೇನೇನೋ ಬೇಕು", ಲಕ್ಷ ಕೋಟಿ ಇರುವವನಿಗೂ "ಇನ್ನೂ ಏನೋ ಬೇಕು". ಹೀಗೆ ಹಾತೊರೆಯುವ ನಮ್ಮೆಲ್ಲರಲ್ಲೂ "ನಾನು" ಇದ್ದಾನೆ. ಯಾವ ವರ್ಗದವರೂ 'ಖುಷಿ'ಯಾಗಿಲ್ಲ ಎಂಬುದನ್ನು ಬೇರೆ ಹೇಳಬೇಕಿಲ್ಲ. ಜೀವನ ಅಷ್ಟೇ ಅಲ್ವಾ ಅವರವರ ಸಂಬಳಕ್ಕೆ ತಕ್ಕಂತೆ ಬಿಲ್ ಪಾವತಿಸುತ್ತಾರೆ, ಅಥವಾ vice-versa ಅವರವರ ಬಿಲ್ ಮೊತ್ತಕ್ಕೆ ಅನುಗುಣವಾಗಿ ಗಳಿಸಲು ಮುಂದಾಗುತ್ತಾರೆ. ಹಾಗಾಗಿ Where there is a bill, there is a way ಅಂತ ಕೂಡ ಬದಲಾಯಿಸಿದರೆ ಅಡ್ಡಿಯಿಲ್ಲ.

ಒಂದು ಪುಟ್ಟ ಉಪ್ಪಿಟ್ಟಿನ ತಟ್ಟೆಯಲ್ಲಿ ಕಂಡ ಚಿಕ್ಕ ಜೀವನದ ದೊಡ್ಡ ವೇದಾಂತ, ಹಾಗೇ ಸುಮ್ಮನೆ.

ಬ್ಲಾಗ್ ಅಂಕಣದ ಹೆಸರು: ಒಂದು ಕುತೂಹಲಕಾರಿ ಉಪ್ಪಿಟ್ಟು ವೇದಾಂತ ಎಂದು ಯೋಚಿಸಿದ್ದೆ. ಆದರೆ ಉಪ್ಪಿಟ್ಟು (ಉಪ್ಪಿ 2) ಅಂತ ಹೇಳಿಬಿಟ್ರೆ ಕುತೂಹಲ ಉಳಿಯೋದಿಲ್ಲ ಅಂತ ಯೋಚಿಸಿ "ಒಂದು ಕುತೂಹಲಕಾರಿ..." ಎಂದಷ್ಟೇ ಹೆಸರನ್ನು ಉಳಿಸಿ ಕುತೂಹಲ ಏನೆಂಬುದರ ಬಗ್ಗೆ ಕುತೂಹಲ ಉಳಿಸಿದೆ ಅಂದ್ಕೊಳ್ತೀನಿ. ಮತ್ತೆ ಸಿಗೋಣ.