ಜುಲೈ 13, 2015

ಅಜಾನುಬಾಹು ಬಾಹುಬಲಿ ಹಾಗೂ ಒಂದು ಮುಖ್ಯ ವಿಷಯ


(ಇದು ಬಾಹುಬಲಿ ಚಿತ್ರದ ರಿವ್ಯೂ ಖಂಡಿತ ಅಲ್ಲ. ಚಿತ್ರ ವಿಮರ್ಶೆ ಮಾಡುವ ಯೋಗ / ಯೋಗ್ಯತೆ ಎರಡೂ ನಮಗಿಲ್ಲ. ಬಾಹುಬಲಿ ಚಿತ್ರ ಹಾಗೂ ಇನ್ನೊಂದು ಮುಖ್ಯ ವಿಷಯವನ್ನೊಳಗೊಂಡ ಮತ್ತೊಂದು ಖಾಲಿಪೀಲಿ ಬ್ಲಾಗ್ ಅಂಕಣ ಇದು, ಅಷ್ಟೇ.)

ಮೊನ್ನೆ ಶುಕ್ರವಾರ ಬಾಹುಬಲಿ ಚಿತ್ರ ನೋಡಿದೆ. ಬಾಹುಬಲಿಗೆ ಬಡಾ ಫ್ಲ್ಯಾಷ್ ಬ್ಯಾಕ್ ಇರುವಂತೆ, ಅಂಕಣಕ್ಕೂ ಒಂದು ಚಿಕ್ಕ ಫ್ಲ್ಯಾಷ್ ಬ್ಯಾಕ್ ಇದೆ. ಅದನ್ನು ಮೊದಲು ಹೇಳಿಬಿಡುವೆ.

ಸಾಗರದಲ್ಲಿನ ಜೀವನ ನನಗೆ ಆಗಾಗ ನನ್ನ ಬಾಲ್ಯದ ದಿನಗಳನ್ನು ನೆನಪು ಮಾಡಿಸುತ್ತೆ. ಆಗ 'ಟೇಟ್ರು'ಗೆ ಹೋಗಿ ಫಿಲಂ ನೋಡಲು ಸಿಕ್ಕಾಪಟ್ಟೆ ಸರ್ಕಸ್ ಮಾಡಬೇಕಿತ್ತು. ಹೆಂಗೆಂಗೋ ಪೇಟೆ ಕಡೆ ಹೋದಾಗ ಒಂದು ಆಡಿಯೋ ಕ್ಯಾಸೆಟ್ ಕೊಡಿಸಿಕೊಂಡು ಬಂದರೆ ಅದೇ ದೊಡ್ಡ ವಿಷಯ. ಇನ್ನೊಂದು ಟ್ವಿಸ್ಟ್ ಏನಪ್ಪ ಅಂದರೆ ಆಗ ಚಳ್ಳಕೆರೆಯಲ್ಲಿ ಇದ್ದದ್ದು ಮೂರು ಥಿಯೇಟರ್ ಗಳು ಮಾತ್ರ. ಒಂದು ಕನ್ನಡ ಚಿತ್ರಗಳಿಗೆ ಮೀಸಲು, ಮತ್ತು ಇನ್ನೊಂದು ತೆಲುಗು ಚಿತ್ರಗಳಿಗೆ. ಮೂರನೆಯ ಥಿಯೇಟರ್ ಬೆಂಗಳೂರಿನ ಸಿಟಿ ಚಾನಲ್ ಗಳ ಥರ, ಯಾವ ಭಾಷೆಯ ಫಿಲಂ ಚೆನ್ನಾಗಿರುತ್ತೋ, ಅದನ್ನು ಹಾಕುತ್ತಿದ್ದರು. ನಮಿಗೋ ಕನ್ನಡ ಬಿಟ್ಟು ಬೇರೆ ಭಾಷೆ ಅರ್ಥ ಆಗ್ತಾ ಇರಲಿಲ್ಲ. ಮಿಸ್ ಆಗಿ ಯಾವುದಾದರೂ ಒಂದು ಫಿಲಂ ನೋಡೋಕೆ ಮನೆಯವರು ಕರೆದುಕೊಂಡು ಹೋದರೆ ಮತ್ತೊಂದು ಫಿಲಂ ನೋಡೋಕೆ ಏನಿಲ್ಲವೆಂದರೂ 6 ತಿಂಗಳುಗಳು ಬೇಕಾಗುತ್ತಿತ್ತು. ಇಂಥ ಟೈಮಲ್ಲಿ ನಮ್ಮ ಪಾಲಿನ ಆಕ್ಸಿಜನ್ ಅಂದರೆ ಉದಯ ಟಿವಿ. ಸಾಕ್ಷಾತ್ಕಾರ ದಂತಹ ಬ್ಲ್ಯಾಕ್ ಅಂಡ್ ವೈಟ್ ಚಿತ್ರಗಳಿಂದ ಹಿಡಿದು ಸಾಹುಕಾರದಂತಹ ಹೊಚ್ಚ ಹೊಸ ಬ್ಲಾಕ್ ಬಸ್ಟರ್ಚಿತ್ರಗಳವರೆಗೂ ಉದಯ ಟಿವಿ ಬಿಟ್ಟರೆ ಬೇರೆ ಗತಿ ಇಲ್ಲ ಎಂಬುವಂತಾಗಿತ್ತು. 'ಊರಿಗೊಂದೇ ಉದಯ ಟಿವಿ' ಅನ್ನೋ ಕಾಲ ಅದು ಅಂತ ಆಗಾಗ ನೆನಪಿಸಿಕೊಳ್ಳುತ್ತೇನೆ. ಈಗ ಸಾಗರಲ್ಲಿನ ಜೀವನಕ್ಕೂ ಮೇಲೆ ಹೇಳಿದ ನನ್ನ ಬಾಲ್ಯಕ್ಕೂ ಇರುವ ಸಾಮ್ಯತೆಯೇ ಅದು. ಆಗ ಇದ್ದದ್ದು ಒಂದೇ ಉದಯ ಟಿವಿ, ಇಲ್ಲಿ ಇರೋದು ಒಂದೇ ಶ್ರೀ ಥಿಯೇಟರ್. ಹಾಗಾಗಿ ಚಿತ್ರಮಂದಿರಕ್ಕೆ ಬರುವ ಯಾವ ಫಿಲಂ ಕೂಡ ಬಿಡಬಾರದು ಅಂತ ನಿರ್ಧರಿಸಿದೆ. ಹೀಗೆ ಶುರುವಾದ ಪಯಣದಲ್ಲಿ ಮೊದಲು ಸಿಕ್ಕಿದ್ದು ರನ್ನ, ಮತ್ತು ಮೊನ್ನೆ ಎದುರಾಗಿದ್ದು ಬಾಹುಬಲಿ.

 
ಸಾಂದರ್ಭಿಕ ಚಿತ್ರ: Baahubali: The Beginning

ಫ್ಲ್ಯಾಷ್ ಬ್ಯಾಕ್ ಆಯಿತು, ಈಗ ವಾಸ್ತವಕ್ಕೆ ಬರುವೆ. ಬಾಹುಬಲಿ ಚಿತ್ರದ ಬಜೆಟ್ ಅಷ್ಟಿದೆ, ಇದನ್ನು ಒಪ್ಪಿಕೊಂಡಿದ್ದರಿಂದ ಇನ್ನು ಎರಡು ವರ್ಷ ಪ್ರಭಾಸ್ ಫಿಲಂಗಳು ಬರಲ್ಲ, ರಾಣಾ ಚಿತ್ರಕ್ಕಾಗಿಯೇ ಶಸ್ತ್ರ ವಿದ್ಯೆಗಳನ್ನು ಕಲಿತಿದ್ದಾನೆ, ಆಡಿಯೋ ರಿಲೀಸ್ ಕಾರ್ಯಕ್ರಮ ಅದ್ಧೂರಿಯಾಗಿ ಆಯಿತು, ಸುದೀಪ್ ಕೂಡ ಒಂದು ವಿಶೇಷ ಪಾತ್ರ ಮಾಡುತ್ತಿದ್ದಾನೆ, ಅದು ಇದು ಅಂತ ಸುಮಾರು ಕಾರಣಗಳಿಂದ ಬಾಹುಬಲಿ ಚಿತ್ರ ಎರಡು ವರ್ಷಗಳಿಂದ ಸದ್ದು ಮಾಡುತ್ತಲೇ ಬಂದಿದೆ. ಸಾಮಾನ್ಯವಾಗಿ pre-release promotion ಗಳಿಗೆ ನಾನು ಸೊಪ್ಪು ಹಾಕೋದಿಲ್ಲ. ಸಿನಿಮಾ ಸೆಟ್ಟೇರಿದಾಗ ಇಲ್ಲವೇ ಬಿಡುಗಡೆಯ ಹಂತಕ್ಕೆ ಬಂದಾಗ ಒಂದು ಫಿಲಂ ನೋಡಬೇಕು ಅಂದ್ಕೊಂಡ್ರೆ ಮುಗೀತು, ಹೆಂಗಾದ್ರೂ ಮಾಡಿ ನೋಡೇ ಬಿಡ್ತೀನಿ. ಎಷ್ಟೋ ಫಿಲಂಗಳಿಗೆ ಕಾರಣದಿಂದಾಗಿಯೇ ಒಬ್ಬನೇ ಹೋಗಿದ್ದೂ ಇದೆ. ಬಾಹುಬಲಿ ಚಿತ್ರದ ಬಿಡುಗಡೆಯ ದಿನ ಸಮೀಪಿಸುತ್ತಿದ್ದಂತೆ ಬೆಂಗಳೂರು ಮತ್ತು ಹೊರ ರಾಜ್ಯಗಳಲ್ಲಿರುವ ನಮ್ ಹುಡುಗರೆಲ್ಲಾ ಫಿಲಂಗೆ ಅಡ್ವಾನ್ಸ್ ಟಿಕೆಟ್ ಬುಕ್ ಮಾಡಿ ಅದರ ಮೆಸೇಜ್ ಗಳನ್ನು ವಾಟ್ಸಾಪ್ ಗ್ರೂಪ್ ನಲ್ಲಿ ಹಾಕುತ್ತಿದ್ದರು. ಹಿಂಗೆಲ್ಲಾ ಮಾಡಿದರೆ ಊರಲ್ಲದ ಊರಿಗೆ ನಮಗೆ ಹೊಟ್ಟೆ ಚುರುಕ್ ಅನ್ನದೇ ಇರೋಕೆ ಹೇಗೆ ಸಾಧ್ಯ? ಹೀಗಿರುವಾಗ ಮೊನ್ನೆ ಗುರುವಾರ ತಿಂಡಿ ಮಾಡಿ ಬಸ್ ಗಾಗಿ ಕಾಯುತ್ತಾ ನಿಂತಿದ್ದಾಗ ಬಾಹುಬಲಿ ಚಿತ್ರದ ಪೋಸ್ಟರ್ ಕಾಣಿಸಿತು. ಸಿಂಪಲ್ಲಾಗಿ ರೈಲ್ವೇ ನಿಲ್ದಾಣ ಎಂದು ಹೆಸರಿಡುವ ಬದಲು 'ಸಾಗರ ಜಂಬಗಾರು' ಅಂತ ಹೆಸರಿಟ್ಟಿರುವ ಊರಲ್ಲಿ ಜನ ತೆಲುಗು ಫಿಲಂ ನೋಡೋ ಸೀನೇ ಇಲ್ಲ. ಶಿವಮೊಗ್ಗದ ಥಿಯೇಟರ್ ನವರು ಇಲ್ಲಿ ಬಂದು ಪೋಸ್ಟರ್ ಹಾಕಿ ಹೋಗಿದ್ದಾರೆ ಎಂದುಕೊಂಡೆ. ಎಂದಿನಂತೆ ಮತ್ತೆ ನಮ್ ಲೆಕ್ಕಾಚಾರ ಮಿಸ್ ಆಯಿತು, ಸಾಗರದಲ್ಲಿರುವ ಥಿಯೇಟರ್ ನವರೇ ಹಾಕಿದ ಪೋಸ್ಟರ್ ಅದಾಗಿತ್ತು. ಬಾಹುಬಲಿ ಚಿತ್ರವನ್ನು ಸಾಗರದಲ್ಲೇ ನೋಡಬಹುದು ಅಂತ ಅಂದುಕೊಂಡು ಸುಮ್ಮನಾದೆ. ಶುಕ್ರವಾರ ಬ್ಯಾಂಕಿನಿಂದ ಸೀದಾ ಥಿಯೇಟರ್ ಹತ್ತಿರ ಬಂದು, ಕ್ಯೂನಲ್ಲಿ ನಿಂತು ಟಿಕೆಟ್ ತಗೊಂಡು, ನಮ್ 'ಚರಂಡಿ' ಜೊತೆ ಫಿಲಂ ನೋಡ್ಕೊಂಡು ಬಂದ್ನಪ್ಪ.

ಈಗ ಬಾಹುಬಲಿ ಚಿತ್ರದ ಬಗ್ಗೆ: ಭಾರತೀಯ ಚಿತ್ರಗಳಲ್ಲಿ ಸಾಮಾನ್ಯವಾಗಿ ಇದ್ದೇ ಇರುವಂಥ ದೃಶ್ಯಗಳನ್ನು  Common Stereotypes of Indian Films ಎಂದು ಅಂತರ್ಜಾಲದಲ್ಲಿ ಹುಡುಕಿದಾಗ ನೋಡಬಹುದು. ಉದಾಹರಣೆಗೆ ಯಾವಾಗಲೂ ಕೇಡು ಬಯಸುವ ವಿಲನ್, ಛಲಗಾರ ಹಾಗೂ ಸಹೃದಯಿ ನಾಯಕ, ಅಂದಗಾತಿ ನಾಯಕಿ, ತಾಯಿ-ಮಗನ ಸೆಂಟಿಮೆಂಟು, ಒಂದಿಷ್ಟು ಹೊಡೆದಾಟದ ದೃಶ್ಯಗಳು ಇತ್ಯಾದಿ. ಇದೆಲ್ಲವೂ ಬಾಹುಬಲಿ ಚಿತ್ರದಲ್ಲಿದೆ. ಹಾಗೆಂದ ಮಾತ್ರಕ್ಕೆ ಬಾಹುಬಲಿ ಚಿತ್ರದಲ್ಲಿ ಸತ್ವ ಇಲ್ಲ ಅಂತ ನಾನು ಹೇಳುತ್ತಿಲ್ಲ. ಬಾಹುಬಲಿ ಹಲವು ಕಾರಣಗಳಿಂದ ನೋಡಿದವರಿಗೆ ಇಷ್ಟವಾಗುತ್ತದೆ. ಈಗಾಗಲೇ ಚಿತ್ರ ಬಿಡುಗಡೆಯಾಗಿ ಮೂರು ದಿನಗಳಾಗಿರುವುದರಿಂದ ಚಿತ್ರದ ಬಗ್ಗೆ positive feedbackಗಳು, negative commentಗಳು, ಕಥೆ ಏನು ಎಂಬಿತ್ಯಾದಿ ವಿಷಯ ಎಲ್ಲರಿಗೂ ಗೊತ್ತೇ ಆಗಿರುತ್ತದೆ. ಆದ್ದರಿಂದ ಬಗ್ಗೆ ನಾನು ಹೆಚ್ಚಿಗೆ ಹೇಳೋಕೆ ಹೋಗೋದಿಲ್ಲ. ಬಾಹುಬಲಿ descriptive ಸಿನಿಮಾ. ಒಂದು ಅಸಾಧಾರಣ ಕಥೆ ಹೇಳುವಾಗ ಗಡಿಬಿಡಿಯಲ್ಲಿ ಹೇಳಿ ಮುಗಿಸಿದರೆ ಕಥೆಯ ಸೊಗಸನ್ನು ವೀಕ್ಷಕನಿಗೆ ದಾಟಿಸೋಕೆ ಆಗೋದಿಲ್ಲ. ಕೆಲವೊಮ್ಮೆ part by part ಹೇಳಬೇಕಾಗುತ್ತದೆ. ಧಾರವಾಹಿಗಳ ಹುಟ್ಟಿನ ಮೂಲ ಇದೇ (ಅದರೆ ಭಾರತೀಯ ಧಾರವಾಹಿಗಳಿಗೆ ವಿಷಯ ಅನ್ವಯಿಸಲ್ಲ, ಅವರು ಒಂದೇ ಸಾಲಿನ ಕಥೆಯನ್ನು ರಬ್ಬರಿನಂತೆ ಏಳೆಯುತ್ತಾರೆ ಅನ್ನೋದು ಬೇರೆ ಮಾತು). ಕಥೆ ತುಂಬಾ ದೊಡ್ಡದಿದ್ದಾಗ ಎರಡು ಭಾಗ ಮಾಡಿ ಹೇಳುವುದು ಈಗಿನ ಟ್ರೆಂಡ್. ರಾಮ್ ಗೋಪಾಲ್ ವರ್ಮಾರ ರಕ್ತ ಚರಿತ್ರ, ಅನುರಾಗ್ ಕಶ್ಯಪ್ ಗ್ಯಾಂಗ್ಸ್ ಆಫ್ ವಾಸೇಪುರ್ ಹಾಗೂ ಇತ್ತೀಚಿನ ಬಾಹುಬಲಿ ಇದಕ್ಕೆ ಒಳ್ಳೆಯ ಉದಾಹರಣೆ. Sequel film ಗಳು ಬೇರೆ, ಅವು ಗೆದ್ದ ಎತ್ತಿನ ಬಾಲ ಹಿಡಿಯುವಂತ ಕೆಲಸಗಳು ಅಷ್ಟೇ

 
ಸಾಂದರ್ಭಿಕ ಚಿತ್ರ: Baahubali: The Beginning


ರಾಮಾಯಣದ ಕಥೆಯನ್ನು ಹೇಳುವುದನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ:
ರಾಮ ಬಂದ,
ಸೀತೆಯನ್ನು ಮದುವೆಯಾದ,
ಕಾಡಿಗೆ ಹೋದ,
ಮತ್ತೆ ಬಂದು ಆಡಳಿತ ಮಾಡಿದ.
ಹೀಗೆ ನಾಲ್ಕೇ ಸಾಲುಗಳಲ್ಲಿ ಹೇಳಿ ಮುಗಿಸಿಬಡಬಹುದು. ಆದರೆ
"
ಶ್ರೀರಾಮನ ಅವತಾರ ವಿಷ್ಣುವಿನ ದಶಾವತಾರಗಳಲ್ಲಿ ಶ್ರೇಷ್ಠ ಅವತಾರ. ತನ್ನ ದೈವಿಕ ಶಕ್ತಿಗಳನ್ನು ಬದಿಗಿರಿಸಿ ಸಾಮಾನ್ಯ ಮನುಜನಂತೆ ರಾಮ ಜೀವನ ಮಾಡುತ್ತಾನೆ. ದಶರಥನೆಂಬ ಮಹಾನ್ ರಾಜನ ವಂಶದಲ್ಲಿ ಜನ್ಮ ತಾಳಿದರೂ ತಂದೆಯ ಮಾತನ್ನು ನೆರವೇರಿಸುವುದಕ್ಕಾಗಿ ಸೀತೆಯೊಂದಿಗೆ ವನವಾಸಕ್ಕೆ ತೆರಳುತ್ತಾನೆ. ಯುದ್ಧ ಮಾಡಿ ರಾವಣನನ್ನು ಸೋಲಿಸಿ ವಿಜಯಿಯಾಗಿ ಹಿಂತಿರುಗಿ ಅಯೋಧ್ಯೆಯ ಆಡಳಿತ ನೋಡಿಕೊಳ್ಳುತ್ತಾನೆ. ಆದ್ದರಿಂದಲೇ ಎಲ್ಲವೂ ಆದರ್ಶಮಯವಾಗಿರುವ ದೇಶ/ರಾಜ್ಯಕ್ಕೆ ರಾಮರಾಜ್ಯ ಎನ್ನುತ್ತಾರೆ."

ಮೇಲಿನ ಹಾಗೆ ರಾಮನ ಗುಣಗಳು ಎಂಥದು, ರಾಮ-ಸೀತೆಯ ನಡುವಣ ಅನುಬಂಧ ಹೇಗಿತ್ತು, ರಾಮನ ಬಗೆಗಿನ ಹನುಮಂತನ ಭಕ್ತಿಯ ತೀವ್ರತೆ ಏನು, ಹೀಗೆ ಹಲವು ಚಿಕ್ಕ ಪುಟ್ಟ ವಿವರಗಳನ್ನು ಕೊಡುತ್ತಾ ಹೋದಾಗ ಕಥೆಗೆ ಒಂದು ಸೊಗಸು ದಕ್ಕುತ್ತದೆ. ಒಂದು ಕಥೆಗೆ ಉಸಿರು ನೀಡುವುದು ರೀತಿಯಾದ 'detail'ಗಳು. ಬಾಹುಬಲಿ ಚಿತ್ರ ನನಗೆ ವೈಯಕ್ತಿಕವಾಗಿ ಇಷ್ಟವಾಗಿದ್ದು ಬಗೆಯ detailed story telling ಕಾರಣದಿಂದಾಗಿ.

ಮೊದಲ ದೃಶ್ಯದಲ್ಲಿ ನದಿಯ ಮಧ್ಯ ಸಿಗುವ ರಾಜಮನೆತನದ ಮಗು, ಕಾಡು ಜನರ ಕೈ ಸೇರುತ್ತದೆ. ಅವನ ಹೆಸರು ಶಿವ. ಶಿವನಿಗೆ ಅಲ್ಲೇ ಇರುವ ಜಲಪಾತ ಕಂಡರೆ ಏನೋ ಒಂದು ರೀತಿಯ ತೀರದ ಕುತೂಹಲ. ಹಾಗೇ ಜಲಪಾತದ ಮೇಲೆ ಏನಿದೆ ಎಂದು ಊಹಿಸುತ್ತಾ, ಮೇಲೆ ಹತ್ತಲು ಪ್ರಯತ್ನ ಪಡುತ್ತಾ ಮತ್ತೆ ಮತ್ತೆ ವಿಫಲನಾಗುತ್ತಿರುತ್ತಾನೆ. ಕೊನೆಗೊಂದು ದಿನ ಹತ್ತಿದಾಗ ಇನ್ನಿಲ್ಲದಂತೆ ಸಂಭ್ರಮಿಸುತ್ತಾನೆ. ತನ್ನ ತಾಯಿ ಶಿವನ ಪೂಜೆಗೆ ನೀರನ್ನು ಹೊತ್ತು ತಂದು ಅಭಿಷೇಕ ಮಾಡಲು ಪಡುವ ಪಾಡನ್ನು ನೋಡಲಾಗದೆ ಅಷ್ಟು ದೊಡ್ಡ ಲಿಂಗವನ್ನೇ ಹೊತ್ತು ತಂದು ಜಲಪಾತದ ಕೆಳಗೆ ಪ್ರತಿಷ್ಠಾಪನೆ ಮಾಡುತ್ತಾನೆ. ತಾನು ಮೆಚ್ಚಿದ ಹುಡುಗಿ ಯಾವಾಗಲೂ ಗಂಭೀರವಾಗಿರುವುದನ್ನು ನೋಡಲಾರದೆ ಅವಳ ಕೈ ಮೇಲೆ ಚಿತ್ತಾರ ಬಿಡಿಸಿ ಅವಳ ನಿಜರೂಪವನ್ನು ಅವಳಿಗೆ ನಿದರ್ಶಿಸುತ್ತಾನೆ. ಇಂಥ ಚಿಕ್ಕ ಪುಟ್ಟ detailಗಳೇ ಪ್ರೇಕ್ಷಕನಿಗರ ಕಿಕ್ ಕೊಡುವುದು. ಮತ್ತು ಕೊನೆಯಲ್ಲಿ ಒಂದು ಚಿತ್ರ ಇಷ್ಟವಾಗಬೇಕಾದರೆ ಇಂಥ ಹಲವು ವಿಷಯಗಳೇ ಸಹಕಾರಿಯಾಗುತ್ತದೆ. ಇಲ್ಲಿ ಉಗ್ರಂ ಚಿತ್ರದ ಉದಾಹರಣೆ ಕೊಡಲು ಬಯಸುತ್ತೇನೆ. ಅದರಲ್ಲಿ ಅಗಸ್ತ್ಯನ ಪಾತ್ರ ತುಂಬಾ ಗಂಭಿರವಾದದ್ದು. ಅಗಸ್ತ್ಯ ಒಂದು ದಿನ ಹಚ್ಚೆ ಹಾಕುವ ಹೆಂಗಸಿನ ಬಳಿ ಹೋಗಿ ಹಚ್ಚೆ ಹಾಕಲು ಹೇಳುತ್ತಾನೆ. ಅವಳು ಯಾವ ಚಿತ್ರ ಹಾಕಲಿ ಅಂತ ಕೇಳಿದಾಗನನ್ನ ಕಣ್ಣಲ್ಲಿ ಏನು ಕಾಣುತ್ತೋ, ಅದನ್ನೇ ಹಾಕು” ಎಂದು ಹೇಳುತ್ತಾನೆ. ಹಾಡು ಮುಗಿಯುವುದರಲ್ಲಿ ಅಗಸ್ತ್ಯನ ಕೈ ಮೇಲೆ ಸಿಂಹದ ಮುಖ ಅಚ್ಚಾಗಿರುತ್ತದೆ. ಸುಖಾಸುಮ್ಮನೆ ಅಗಸ್ತ್ಯ ಒಬ್ಬ ಧೀರ/ಶೂರ ಅಂತ ಹೇಳುವ ಬದಲು ರೀತಿಯಾಗಿ ವಿಭಿನ್ನವಾಗಿ ಕಥೆಯನ್ನು ನಿರೂಪಣೆ ಮಾಡಿದರೆ ಅಷ್ಟು ಸುಲಭವಾಗಿ ಸಿನಿಮಾದ 'ಕಿಕ್' ಇಳಿಯುವುದಿಲ್ಲ. ಬಾಹುಬಲಿ ಚಿತ್ರದಲ್ಲಿ ಇರುವ ಇಂತಹ ಕೆಲವು ಅಂಶಗಳು ನನಗೆ ಬಗೆಯ ಕಿಕ್ ಕೊಡುವಲ್ಲಿ ಯಶಸ್ವಿಯಾದವು ಎಂದು ಹೇಳಲು ಅಡ್ಡಿಯಿಲ್ಲ.

ನನ್ನ ಪ್ರಕಾರ ಒಂದು ಸಿನಿಮಾಕ್ಕೆ ಅಂತ್ಯ ಎಷ್ಟು ಮುಖ್ಯವೋ, ಮಧ್ಯಂತರವೂ ಅಷ್ಟೇ ಮುಖ್ಯ. ನನಗನಿಸುವಂತೆ ಬಾಹುಬಲಿ ಚಿತ್ರದ ಯುದ್ಧದ ದೃಶ್ಯಗಳಿಗಿಂತ ಅದರ ಮಧ್ಯಂತರದ ದೃಶ್ಯವೇ ಚಿತ್ರದ ಹೈಲೈಟ್. ಅದನ್ನು ನನ್ನ ಪದಗಳಲ್ಲಿ ಹಾಗೇ ಕಟ್ಟಿಕೊಡಲು ಪ್ರಯತ್ನಿಸಿದ್ದೇನೆ. ಚೆನ್ನಾಗಿದೆಯಾ ಅಂತ ಸಿಕ್ಕಾಗ ಹೇಳಿ:

 
ಸಾಂದರ್ಭಿಕ ಚಿತ್ರ: Baahubali: The Beginning

ಬಲ್ಲಾಳ ದೇವ ಮನದ ತುಂಬಾ ದ್ವೇಷ ತುಂಬಿಕೊಂಡ ರಾಜ. ಅವನ ಆಡಳಿತ ಯಾರಿಗೂ ಇಷ್ಟವಿರುವುದಿಲ್ಲ. ಹಲವು ವರ್ಷಗಳ ಹಿಂದೆ ಸಾವನ್ನಪ್ಪಿ ಮರೆಯಾದ ಅಮರೇಂದ್ರ ಬಾಹಿಬಲಿಯೇ ಪ್ರಜೆಗಳೆಲ್ಲರಿಗೂ ದೇವರು. ಹೀಗಿರುವಾಗ ಬಲ್ಲಾಳ ದೇವ ತನ್ನ 100 ಅಡಿ ಎತ್ತರದ ಪ್ರತಿಮೆಯನ್ನು ಪ್ರತಿಷ್ಠಾಪಿಸಲು ಯೋಚಿಸುತ್ತಾನೆ. ಕೆಲಸವೆಲ್ಲಾ ಮುಗಿದು, ಪ್ರತಿಮೆಯನ್ನು ನಿಲ್ಲಿಸುವ ಕೆಲಸವೊಂದು ಬಾಕಿ ಉಳಿದಿರುತ್ತದೆ. ಬಲ್ಲಾಳ ದೇವನ ಹುಟ್ಟು ಹಬ್ಬದ ದಿನ ಪ್ರತಿಮೆಯನ್ನು ನಿಲ್ಲಿಸುವ ಕೆಲಸ ಶುರುವಾಗುತ್ತದೆ. ಅದೇ ದಿನ ಅಮರೇಂದ್ರ ಬಾಹುಬಲಿಯ ಮಗ ಬಾಹುಬಲಿ, ತನ್ನ ತಾಯಿಯನ್ನು ಬಲ್ಲಾಳ ದೇವನ ಬಂಧನದಿಂದ ಬಿಡಿಸಿಕೊಂಡು ಹೋಗಲು ವೇಷ ಮರೆಸಿಕೊಂಡು ಬಂದಿರುತ್ತಾನೆ. ಎಲ್ಲಾ ಸೇವಕರು ಹಗ್ಗ ಹಾಗೂ ಚಕ್ರಗಳ ಸಹಾಯದಿಂದ ಬಲ್ಲಾಳ ದೇವನ 100 ಅಡಿ ಎತ್ತರದ ಪ್ರತಿಮೆಯನ್ನು ನಿಲ್ಲಿಸಲು ಹರಸಾಹಸ ಪಡುತ್ತಿರುತ್ತಾರೆ. ಯಾರಲ್ಲೂ ತಮ್ಮ ರಾಜನ ಪ್ರತಿಮೆ ನಿಲ್ಲಿಸುತ್ತಿದ್ದೇವೆ ಎಂಬ ಆನಂದವೇ ಇರುವುದಿಲ್ಲ. ವಾದ್ಯ ನುಡಿಸುವವರು ಹಾಗೂ ನೃತ್ಯ ತಂಡದವರು ಮನಸ್ಸಿಲ್ಲದ ಮನಸ್ಸಿನಿಂದ ತಮ್ಮ ಕಲೆಯನ್ನು ಪ್ರದರ್ಶಿಸುತ್ತಿರುತ್ತಾರೆ. ಹೀಗಿದ್ದಾಗ ಒಬ್ಬ ವಯಸ್ಸಾದ ಸೇವಕ ಆಯ ತಪ್ಪಿ ಕೆಳಗೆ ಬಿದ್ದು ಬಿಡುತ್ತಾನೆ. ಅವನ ಹಿಂದೆಯೇ ಅದೇ ಸಾಲಿನಲ್ಲಿದ್ದ ಸೇವಕರೆಲ್ಲರೂ ಹಿಡಿತ ತಪ್ಪಿ  ಹಗ್ಗ ಬಿಟ್ಟುಬಿಡುತ್ತಾರೆ. ಪ್ರತಿಮೆ ಇನ್ನೇನು ನೆಲ ಸೇರಿತು ಎನ್ನುವ ಹೊತ್ತಿಗೆ ಬಾಹುಬಲಿ ಬಂದು ಹಗ್ಗವನ್ನು ಹಿಡಿದು ಮತ್ತೆ ಸೇವಕರಿಗೆ ಒಪ್ಪಿಸಿ ಮುಖವನ್ನು ಮರೆಮಾಡಿಕೊಂಡು ತೆರಳುತ್ತಾನೆ. ಬಾಹುಬಲಿಯ ಮುಖದಲ್ಲಿ ಅವನ ತಂದೆಯ ತೇಜಸ್ಸನ್ನು ಕಾಣುವ ಸೇವಕ, "ಬಾಹುಬಲಿ, ಬಾಹುಬಲಿ, ಬಾಹುಬಲಿ" ಎಂದು ಉದ್ಗರಿಸುತ್ತಾನೆ. ಅವನ ಹಿಂದೆಯೇ ಅವನ ಹಿಂದಿರುವ ಸೇವಕರೆಲ್ಲರೂ "ಬಾಹುಬಲಿ, ಬಾಹುಬಲಿ" ಎಂದು ಕೂಗುತ್ತಾ ದನಿಗೂಡಿಸುತ್ತಾರೆ. ಕ್ಷಣಮಾತ್ರದಲ್ಲಿ ಅಮರೇಂದ್ರ ಬಾಹುಬಲಿಯ ಹೆಸರು ಅಂಗಳದ ತುಂಬೆಲ್ಲಾ ಪ್ರತಿಧ್ವನಿಸುತ್ತದೆ. ಇದರಿಂದ ಪ್ರೇರೇಪಿತರಾದ ವಾದ್ಯಗಾರರು ಯಾವುದೋ ಮಾಂತ್ರಿಕ ಶಕ್ತಿ ಆವರಿಸಿದಂತೆ ತಮ್ಮ ವಾದ್ಯಗಳನ್ನು ಬಾರಿಸಲು ಆರಂಭಿಸುತ್ತಾರೆ. ವಾದ್ಯಗಳ ಜೋರಾದ ಬಡಿತಕ್ಕೆ ತಕ್ಕಂತೆ ನೃತ್ಯಗಾರರ ನರ್ತನವೂ ವೇಗ ಪಡೆದುಕೊಳ್ಳುತ್ತದೆ. ಇದೆಲ್ಲದರ ಪರಿಣಾಮವಾಗಿ ಬಲ್ಲಾಳ ದೇವನ 100 ಅಡಿ ಎತ್ತರದ ಪ್ರತಿಮೆ ಪ್ರತಿಷ್ಠಾಪನೆಯಾಗುತ್ತದೆ. ಆದರೆ ಪ್ರತಿಮೆಯನ್ನು ಪ್ರತಿಷ್ಠಾಪಿಸುವಾಗ "ಬಾಹುಬಲಿ, ಬಾಹುಬಲಿ" ಎಂದು ಸೇವಕರು ಉದ್ಗರಿಸಿದ್ದನ್ನು ಬಲ್ಲಾಳ ದೇವನಿಂದ ಸಹಿಸಿಕೊಳ್ಳಲಾಗುವುದಿಲ್ಲ. ಬಲ್ಲಾಳ ದೇವನಿಗೆ ಅವನ 100 ಅಡಿ ಪ್ರತಿಮೆಯ ಹಿಂದೆ ಅಮರೇಂದ್ರ ಬಾಹುಬಲಿಯ 1000 ಅಡಿ ಎತ್ತರದ ಪ್ರತಿಮೆ ಗೋಚರಿಸುತ್ತದೆ. ಬಾಹುಬಲಿಯ ಬಗೆಗಿನ ಜನರ ಅಭಿಮಾನದ ಮುಂದೆ ತಾನು ಏನೂ ಅಲ್ಲ ಎಂದು ಅನಿಸಿದ್ದರಿಂದ ತುಂಬಾ ಕೋಪಗೊಳ್ಳುತ್ತಾನೆ. ಅಲ್ಲಿಗೆ ಮಧ್ಯಂತರರ ದೃಶ್ಯ ಕಣ್ಣ ಮುಂದೆ ಬರುತ್ತದೆ. ಇಡೀ ದೃಶ್ಯವೇ ಅಪೂರ್ವ. ಮಾತಿನಲ್ಲಿ ಹೇಳುವುದಕ್ಕಿಂತ ಇನ್ನೊಮ್ಮೆ ನೋಡಬೇಕೆನಿಸುತ್ತಿದೆ.

ಹೆಚ್ಚಿನ ಬಜೆಟ್, VFX ದೃಶ್ಯಗಳು, ಚೆಂದ ಕಾಣುವ ಚೆಂದ ಕಾಣುವ ನಾಯಕ / ನಾಯಕಿಯರು ಹೀಗೆ ಅನೇಕ ಇತರೆ ವಿಷಯಗಳು ಸಿನಿಮಾದಲ್ಲಿದ್ದರೂ, ಕಥೆಯ ನಿರೂಪಣೆಯ ಶೈಲಿಗಾಗಿ ನೋಡಲೇಬೇಕಾದ ಚಿತ್ರ ಬಾಹುಬಲಿ.

ಒಂದು ಮುಖ್ಯ ವಿಷಯ: ನನ್ನ ಪ್ರಕಾರ ಒಂದು ಒಳ್ಳೆಯ ಚಿತ್ರ ಒಂದು ಒಳ್ಳೆ ಭೋಜನಕ್ಕೆ ಸಮ. North Indian ಆದರೇನು ಶಿವ, Continental ಆದರೇನು ಶಿವ, ಎಲ್ಲವೂ ಒಂದೇ ಶಿವ ಅಂತ ಬ್ಯಾಟಿಂಗ್ ಮಾಡಬೇಕು ಅಷ್ಟೇ. ಭಾಷಾಭಿಮಾನ ಬೇರೆ, ಸಿನಿಮಾಭಿಮಾನ ಬೇರೆ. ಎರಡನ್ನೂ ಲಿಂಕ್ ಮಾಡೋದು ಬೇಡ. ಒಂದು ಭಾಷೆಯ ಅತ್ಯುನ್ನತೆ ನಿರ್ಧಾರವಾಗುವುದು, ಭಾಷೆಯ ಸಾಹಿತ್ಯ, ಪರಂಪರೆ ಹಾಗೂ ಅದಕ್ಕಿರುವ ಭವ್ಯ ಇತಿಹಾಸದ ಮೇಲೆ. ಕನ್ನಡ ಭಾಷೆ ವಿಷಯಗಳಲ್ಲಿ ಶ್ರೀಮಂತವಾಗಿದೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಷಯವೇ. ಬಾಹುಬಲಿ ಚಿತ್ರದ ಬದಲು ಕನ್ನಡ ಚಿತ್ರಗಳನ್ನೇ ನೋಡಿ ಎಂದು ಪ್ರೇಕ್ಷಕರ ಮೇಲೆ ಒತ್ತಡ ಹೇರುವುದು ಸರಿಯಲ್ಲ. ಪರಭಾಷಾ ಸಿನಿಮಾಗಳನ್ನು ನೋಡಿ ಮೆಚ್ಚುಗೆ ಸೂಚಿಸುವುದು ಮಾತೃಭಾಷೆ ಕನ್ನಡಕ್ಕೆ ಮಾಡಿದ ದ್ರೋಹ ಖಂಡಿತ ಅಲ್ಲ. ಕನ್ನಡ ಭಾಷೆಗೆ 2000 ವರ್ಷಗಳ ಇತಿಹಾಸವಿದೆ. ಕನ್ನಡದಲ್ಲಿ ಸಿನಿಮಾಗಳು ಬಂದು 80 ವರ್ಷಗಳಾಗಿರಬಹುದು. ಹಾಗಾಗಿ ಕನ್ನಡ ಚಿತ್ರಗಳಿಂದಲೇ ಕನ್ನಡ ಭಾಷೆ ಸಮೃದ್ಧವಾಗಿದೆ ಎಂಬುದು ಸುಳ್ಳು. ಹಾಗಂತ ಕನ್ನಡದಲ್ಲಿ ಒಳ್ಳೆಯ ಚಿತ್ರಗಳು ಇಲ್ಲವೇ ಇಲ್ಲ ಅಂತ ಅಲ್ಲ. ಸಿನಿಮಾಗಳನ್ನೇ ನೋಡದೇ ಇರುವ ನನ್ನ ಮಿತ್ರನೊಬ್ಬ ರಂಗಿತರಂಗ ನೋಡು  ಮಗಾ, ತುಂಬಾ ಚೆನ್ನಾಗಿದೆ ಅಂತ ಮೆಸೇಜ್ ಮಾಡಿದ್ದ. ಮೆಸೇಜ್ ಓದಿ ತುಂಬಾ ಖುಷಿಯಾಯಿತು. ಸಿನಿಮಾ ದೇಶ ಹಾಗೂ ಭಾಷೆಗಳ ಎಲ್ಲೆಯನ್ನು ಮೀರಿದ ಒಂದು ಮನೋರಂಜನಾ ಮಾಧ್ಯಮ ಅಷ್ಟೇ. ಸಾವಿರ ಜನ ಸೇರಿ ಒಂದು ಸಿನಿಮಾ ಆಗುತ್ತದೆ. ಒಳ್ಳೆಯ ಹಾಗೂ ಕೆಟ್ಟ ಚಿತ್ರಗಳು ಎಲ್ಲಾ ಭಾಷೆಗಳಲ್ಲೂ ಬರುತ್ತವೆ ಹೋಗುತ್ತವೆ. ಕೇವಲ ಅವುಗಳಿಂದಲೇ ಭಾಷೆಯ ಮೌಲ್ಯವನ್ನು ಅಳೆಯುವುದು ಶುದ್ಧ ಮೂರ್ಖತನ.

P.s: ಬಾಹುಬಲಿ ಚಿತ್ರದಲ್ಲಿ ಹಾಸ್ಯದ ಸನ್ನಿವೇಶಗಳಿಲ್ಲ. ಆದರೆ ಎರಡನೇ ಭಾಗದಲ್ಲಿ ಕಾಲಕೇಯ ಎಂಬ ಕಾಡು ಜನಾಂಗದವರ ವಿರುದ್ಧ ಒಂದು ಭರ್ಜರಿ ಯುದ್ಧದ ಸನ್ನಿವೇಶವಿದೆ. ಯಾವುದೋ ಕಾಲ್ಪನಿಕ ಭಾಷೆಯಲ್ಲಿ ಮಾತನಾಡುವ ಅವರ ಮಾತುಗಳನ್ನು ಕೇಳಿತ್ತಿದ್ದರೆ, ಅಂಥ ಗಂಭೀರ ದೃಶ್ಯದಲ್ಲೂ ನನಗೆ ನಗು ಬರುತ್ತಿತ್ತು. ಎಲ್ಲಾ ಜಾಗಗಳಲ್ಲೂ ಹಾಸ್ಯ ಹುಡುಕುವ ನಮ್ಮಂಥವರನ್ನು ನೋಡಿಯೇ, ಹುಟ್ಟು ಗುಣ ಸುಟ್ಟರೂ ಹೋಗಲ್ಲ ಅಂತ ಹೇಳಿರಬೇಕು.

1 ಕಾಮೆಂಟ್‌: