ಏಪ್ರಿಲ್ 5, 2015

ಮೂರು ಅಸಹಜ ಸಮಸ್ಯೆಗಳು



ಬಹಳ ಹಿಂದಿನ ಮಾತು, ಆಗಿನ್ನೂ ನಾನು ಇಸ್ಕೂಲಲ್ಲಿ ಓದುತ್ತಿದ್ದೆ. ನಮ್ ಹಳ್ಳಿ ಕಡೆ ಶಾಲೆಗೆ ಇಸ್ಕೂಲು ಅಂತಾರೆ. ಹಳ್ಳಿ ಸೊಗಡಿನ ಕನ್ನಡದಲ್ಲಿ ಮಾತನಾಡುವ ಸೊಗಸೇ ಬೇರೆ ಅಲ್ವಾ? ಇಸ್ಕೂಲಲ್ಲಿ ಸಿಗುವ ಗೆಳೆಯರ ಬಳಗ ಒಂದೊಳ್ಳೆ ಪರಿಪೂರ್ಣ ಹಬ್ಬದ ಊಟದ ಥರ. ಉಪ್ಪು, ಖಡಕ್ ಉಪ್ಪಿನಕಾಯಿ, ಖಾರದ ಕೋಸಂಬರಿ, ಸಿಹಿ ಹೋಳಿಗೆ, ಸಾಧಾರಣ ಅನ್ನ, ವೈವಿಧ್ಯಮಯ ಸಾರು ಹೀಗೆ ತಟ್ಟೆಯ ತುಂಬಾ ಎಷ್ಟೊಂದು ವಿಶೇಷತೆಗಳು ತುಂಬಿರುತ್ತದೆಯೋ ಹಾಗೆ ಗೆಳೆಯರು ಕೂಡ. ಒಬ್ಬನಿಗೆ ರಾಜಕೀಯದ ಬಗ್ಗೆ ಅಪಾರ ಜ್ಞಾನ ಇರುತ್ತೆ, ಇನ್ನೊಬ್ಬ ಓದುವುದನ್ನು ಬಿಟ್ಟು ಬೇರೇನೂ ಮಾಡಲ್ಲ, ಇನ್ನೊಬ್ಬನಿಗೆ ಮಾತಾಡೋಕೆ ಹುಡುಗಿಯರನ್ನೊಳಗೊಂಡ ಟಾಪಿಕ್ ಬಿಟ್ರೆ ಬೇರೇನೂ ಸಿಗಲ್ಲ, ಇನ್ನೊಬ್ಬನಿಗೆ ಸಿನಿಮಾ-ಧಾರಾವಾಹಿಯ ಗೀಳು, ಇನ್ನೊಬ್ಬ ಮೌನಿ, ಮತ್ತೊಬ್ಬ ಪುಸ್ತಕಗಳ ಆರಾಧಕ, ಹೀಗೆ ಗೆಳೆಯರೂ ಕೂಡ. ಹೀಗಿರುವಾಗ ನನ್ನ ಗೆಳೆಯರಲ್ಲಿ ಹಲವರು 'Student life is Golden life' ಎಂದು ನಂಬಿದ್ದಾರೆ. ಅವರೆಲ್ಲಾ ಶಾಲೆಯಲ್ಲಿ ಮಜಾ ಮಾಡಿರೋರು, ಜೀವನದ  ಅತ್ಯಂತ ಸಿಹಿ ಘಟನೆಗಳು ಅವರಿಗೆ ಶಾಲಾ ಆವರಣದಲ್ಲಿ ನೆಡೆದಿವೆ. ನನಿಗಂತೂ ಸ್ಕೂಲಲ್ಲಿ ಅಷ್ಟೇನೂ 'ಲೋಕಜ್ಞಾನ' ಇರಲಿಲ್ಲ (Code word: ಲೋಕಜ್ಞಾನ ಅಂದ್ರೆ ಗೊತ್ತಾಯ್ತಲ್ಲಾ, ಪ್ರೀತಿ ಗೀತಿ ಇತ್ಯಾದಿ). ಆದರೆ ನಮ್ ಹುಡುಗರು ಕೆಲವರೆಲ್ಲಾ ಆಗ್ಲೇ ಲವ್ ಲೆಟರ್ ಬರೆಯುವ ರೇಂಜ್ ಗೆ ಹೋಗಿದ್ರು. ಇನ್ನೂ ಕೆಲವರಿಗೆ ಕೆಲವರ ಮೇಲೆ ಆಗಾಧವಾದ crush ಇತ್ತು ಅಂತ ತುಂಬಾ ಲೇಟಾಗಿ ಗೊತ್ತಾಯ್ತು.
ಇನ್ನೂ ಕೆಲವರಿದ್ದಾರೆ. ಅವರೆಲ್ಲಾ No Tomorrow! (How I Met Your Mother ಧಾರವಾಹಿಯ ಪ್ರಸಿದ್ಧ ಸಾಲು) ಮತ್ತು You Only Live Once (YOLO) ಮಂತ್ರ ಜಪಿಸಿದವರು. ಇವರಲ್ಲಿ ಹಲವರು ಕಾಲೇಜ್ ಕಾಂಪೌಂಡ್ ಗೋಡೆಯ ಮೇಲೆ ಕನಸಿನ ಗ್ರಾಫಿಟಿ ರಚಿಸಿದರು, ಸ್ವಂತ ಕಂಪನಿ ತೆರೆಯುವ ಮಹದಾಸೆ ಹೊಂದಿದರು, ಎಲ್ಲರಿಗಿಂತ ತನ್ನ ಲವ್ ಸ್ಟೋರಿಯೇ ವಿಭಿನ್ನ ಎಂದು ಪ್ರತಿಪಾದಿಸಿದರು. ಇದೇ ಗುಂಪಿನಲ್ಲಿ ಹೆಚ್ಚಿಗೆ ಓದಿ ಐಟಿ ಕಂಪನಿಗಳಲ್ಲಿ HR ಆದವರು ಮತ್ತು ತೀರಾ ಏನೂ ಓದದೇ ರಾಜಕೀಯ ಸೇರಿ HM ಆದವರು ಕೂಡ ಸಿಗುತ್ತಾರೆ. ಶಾಲೆ-ಕಾಲೇಜಿನ ಬಗ್ಗೆ ಇಷ್ಟು ಸಾಕು. ಅಂಕಣದ ಬರೆಯಲು ಆರಂಭಿಸಿದ್ದು ಮನುಷ್ನ ಜೀವನದ ಮೂರು ವಿಭಿನ್ನ ಘಟ್ಟಗಳ ಮೂರು ವಿಭಿನ್ನ ಸಮಸ್ಯೆಗಳ ಕುರಿತು ಹೇಳಲು. ಸಮಸ್ಯೆಗಳನ್ನು ಸ್ವಲ್ಪ ತರ್ಲೆ ಶೀರ್ಷಿಕೆಯೊಂದಿಗೆ ವಿವರಿಸಿದ್ದೇನೆ.

ಏನ್ ಲಕ್ಕು ಮಗಾ!

ಸಾಂದರ್ಭಿಕ ಚಿತ್ರ: ಲಕ್ಕಿ
ಸದಾಶಿವನಿಗೆ ಅದೇ ಧ್ಯಾನ ಅನ್ನೋ ಮಾತಿದೆ. ಹಾಗೆಯೇ ಸದಾ ಸಿನಿಮಾ ಧ್ಯಾನಿಸುವವರಿಗೆ ಮೇಲಿನ ಶೀರ್ಷಿಕೆ ಯಶ್ ಅಭಿನಯದ ಲಕ್ಕಿ ಸಿನಿಮಾದ ಅಡಿಬರಹ ಎಂದು ನೆನಪಾಗಲು ಹೆಚ್ಚಿನ ಸಮಯ ಬೇಕಾಗದು. ಈಗ ಹೇಳುತ್ತಿರುವ ಮೊದಲ ಸಮಸ್ಯೆ ಯುವಕರದ್ದು. ನಾನು ಕಂಡ ಹಾಗೆ ಒಬ್ಬ ಸಾಮಾನ್ಯ ಯುವಕನ ಲೈಫು ಹೀಗಿರುತ್ತೆ. ಮೊದಲು ಸ್ಕೂಲು, ಅಮೇಲೆ ಕಾಲೇಜು, ನಂತರ ಎಲ್ಲರಂತೆಯೇ ಸ್ವಂತ ಕಂಪನಿ ಶುರು ಮಾಡಬೇಕೆಂಬ ಆಸೆ, ಮತ್ತು ಇನ್ನೂ ಕೆಲವರಿಗೆ ಮೊದಲ ಬಾರಿಗೆ ಪ್ರೀತಿಸಿದವರ ಜೊತೆಯಲ್ಲಿ ಓಡಾಡಿದ ಪುಳಕ, ಹೀಗೆ ಹತ್ತು ಹಲವು ಸನ್ನಿವೇಶಗಳಿರುತ್ತವೆ. ಇಷ್ಟೆಲ್ಲಾ ಆದ್ರೂ ನಾವು ಯಾವಾಗ್ಲೂ ಅಂದ್ಕೊಳ್ತೀವಿ, 'ಛೇ, ನಾನು ಪ್ರದೀಪನಷ್ಟು ಇಂಟೆಲಿಜೆಂಟ್ ಆಗಿದ್ರೆ ಚೆನ್ನಾಗಿರುತಿತ್ತು', 'ಛೇ, ನಾನು ರಾಜೇಶನಷ್ಟು ಹ್ಯಾಂಡ್ಸಮ್ ಆಗಿದ್ರೆ ಚೆನ್ನಾಗಿತರುತಿತ್ತು', 'ರಾಧಾ-ಕಾರ್ತಿಕ್ ಇಬ್ರೂ ಒಳ್ಳೆ ಜೋಡಿ ಅಲ್ವಾ, ನಮ್ ಲೈಫಲ್ಲಿ ಇಂಥ ದಿನ ಯಾವಾಗ ಬರುತ್ತೋ?!', 'ನಾನೂ ಕೂಡ ಸಚಿನ್ ಥರ ಯಾವುದಾದ್ರೂ ದೊಡ್ಡ ಶ್ರೀಮಂತರ ಮನೆಯಲ್ಲಿ ಹುಟ್ಟಬೇಕಿತ್ತು' ಇತ್ಯಾದಿ. ಒಂದಾ? ಎರಡಾ? ಹೀಗೆ ಹಲವಾರು ಯೋಚನೆಗಳು ನಮ್ಮ ಗೆಳೆಯರನ್ನು ನೋಡಿದಾಗ ನಮ್ಮ ತಲೆಯಲ್ಲಿ ಮೂಡುತ್ತವೆ. ಇದು ಅಸೂಯೆ ಖಂಡಿತಾ ಅಲ್ಲ, ಇಲ್ಲದಿರುವುದರ ಬಗೆಗಿನ ಆಸೆ, ಅದನ್ನು ಪಡೆಯುವುದರ ಬಗೆಗಿನ ತುಡಿತ ಅಷ್ಟೇ. ಯೌವ್ವನದ ಅರ್ಧ-ಮುಕ್ಕಾಲು ಪಾಲು ಯಾರ ಲೈಫು ಹೇಗಿದೆ? ನಾವು ಯಾಕೆ ಹಿಂಗಿದ್ದೀವಿ? ಇಂಜಿನಿಯರಿಂಗ್ ಮುಗಿಯಿತು, ಮುಂದೇನು ಮಾಡೋದು? ಅಂತ ಯೋಚನೆ ಮಾಡೋದರಲ್ಲೇ ಕಳೆದಿರುತ್ತದೆ. ಕಡೆಗೊಂದು ದಿನ ಕೆಲಸ ಸಿಕ್ಕಿದ ಮೇಲೆ, ಮದುವೆಯಾದಾಗ, "ಅರೆರೇ, ಭೂಮಿ ಯಾವಗ್ಲೋ ವೇಗವಾಗಿ ತಿರುಗೋದನ್ನು ಕಲಿತಿದೆ ಅನಿಸುತ್ತೆ, ಸಮಯ ಹೋಗಿದ್ದೇ ಗೊತ್ತಾಗಲಿಲ್ಲ" ಎನ್ನುವುದು ಕಾಮನ್ ಡೈಲಾಗು.

 

ಅಂಕಲ್, ಬಾಲ್ ಪಾಸ್ ಮಾಡಿ


 ಸಾಂದರ್ಭಿಕ ಚಿತ್ರ: ದೃಶ್ಯ
ಸುಮಾರು 35 ರಿಂದ 40 ವರ್ಷದ ಜೀವನದ ಘಟ್ಟಕ್ಕೆ ಹೋಗೋಣ. ಮುಂಜಾನೆ ಬೇಗನೇ ಎದ್ದು, ಸ್ನಾನ ಮಾಡಿ ರೆಡಿಯಾಗಿ, ಅಡುಗೆ ಮಾಡಿ, ಮಾಡಿದ ತಿಂಡಿ ತಿಂದು, ಮಕ್ಕಳನ್ನು ಸ್ಕೂಲ್ ಗೆ ಬಿಟ್ಟು, ಆಫೀಸ್ ಗೆ ಹೋಗಿ, ಸಂಜೆವರೆಗೂ ಕೆಲಸ ಮಾಡಿ, ಮತ್ತೆ ಮಕ್ಕಳನ್ನು ಮನೆಗೆ ಕರೆದುಕೊಂಡು ಬಂದು, ಹೋಮ್ ವರ್ಕ್ ಮಾಡಲು ಹೇಳಿ, ಹಾಗೇ ನಡುವಲ್ಲಿ ಟಿವಿ ನೋಡುತ್ತಾ ಅಡುಗೆ ಮಾಡಿ, ಊಟ ಮಾಡಿ ಮಲಗಿದ್ರೆ ಮುಗೀತು. ಮತ್ತೆ ಮರುದಿನ ಅದೇ ಪರಿಯ ಬದುಕು. ಸಿಗುವ ಒಂದು ಭಾನುವಾರ ಮನೆ ಕ್ಲೀನ್ ಮಾಡೋಕೆ, ಬೈಕು-ಕಾರು ಒರೆಸೋಕೆ ಸಾಕಾಗುತ್ತೆ. ಕಾಲೇಜಿನಲ್ಲಿ ಜೊತೆಗೆ ಅಲೆದಾಡಿದ ಫ್ರೆಂಡ್ಸುಗಳು ಕೂಡ ಯಾರೆಲ್ಲಿ ಇದ್ದಾರೆ ಎಂಬುದು ನೆನಪಿರುವುದಿಲ್ಲ. ಒಂದು ವೇಳೆ ಒಂದೇ ಊರಿನಲ್ಲಿದ್ದರೂ ಸಿಗುವುದು ವಿರಳ. ಹೀಗೆ ಎಲ್ಲರೂ ಇದ್ದರೂ, ಯಾರೂ ಇಲ್ಲದೇ ಇರುವಂತಾಗುವ ಸಂದರ್ಭದಲ್ಲಿ ಏನೋ ಯೋಚನೆ ಮಾಡುತ್ತಾ, ಕಾಂಪೌಂಡ್ ಗೋಡೆಯ ಮೇಲಿರುವ ಬೋನ್ಸಾಯ್ ಗಿಡಗಳಿಗೆ ನೀರು ಹಾಕುವಾಗ, ಅಚಾನಕ್ ಆಗಿ ಬಾಲ್ ಬಂದು ಕಾಂಪೌಂಡ್ ಒಳಗಡೆ ಬೀಳುತ್ತೆ. ಟೀಮ್ ನಲ್ಲಿದ್ದ ಮುದ್ದಾದ ಪುಟಾಣಿ ಹುಡುಗ ವಿಧಿಯಿಲ್ಲದೆ ಬಂದು "ಅಂಕಲ್, ಬಾಲ್ ಪಾಸ್ ಮಾಡಿ" ಅಂತಾನೆ. ಮರು ಯೋಚನೆ ಮಾಡದೇ, " ಇಲ್ಲಿ ಯಾಕ್ರೋ ಕ್ರಿಕೆಟ್ ಆಡ್ತಾ ಇದ್ದೀರಾ? ಹೋಗಿ ಗ್ರೌಂಡಲ್ಲಿ ಆಟ ಆಡಿ" ಅಂತ ಚೂರು ಬೈದು ಬಾಲ್ ಎಸೆದ ಕ್ಷಣದಲ್ಲಿ ಯಾವುದೋ ಮೂಲೆಯಿಂದ ಯೋಚನೆಯೊಂದು ಬರುತ್ತೆ. ಅರೇ, ಒಂದು ಕಾಲದಲ್ಲಿ ನಾವು ಕ್ರಿಕೆಟ್ ಆಡಿ ಇನ್ನೊಬ್ಬರ ಮನೆ ಕಿಟಕಿ ಹೊಡೀತಾ ಇದ್ವಿ, ಆಗ್ಲೇ ಇನ್ನೊಬ್ಬರ ಮನೆ ಮಕ್ಕಳಿಗೆ ಬಾಲ್ ಕೊಡೋ ಅಷ್ಟು ವಯಸ್ಸಾಗೋಯ್ತಾ ಅಂತ ಅನಿಸೋಕೆ ಶುರುವಾಗುತ್ತೆ. ಸ್ವಂತ ಮ್ಯೂಸಿಕ್ ಬ್ಯಾಂಡ್ ಮಾಡಿ ಹಾಡು ಕಟ್ಟಬೇಕೆಂದಿದ್ದ ಕನಸು, ಪ್ರೀತಿಸಿದ್ದ ಹುಡುಗಿಯನ್ನೇ ಮದುವೆಯಾಗಬೇಕೆಂದಿದ್ದ ಬಯಕೆ, ಸ್ವಂತ ಕಂಪನಿ ಕಟ್ಟಬೇಕೆಂದಿದ್ದ ಆಸೆ, ಅದು ಇದು ಅಂತ ಸಾವಿರ ಕನಸು ಕಂಡಿದ್ದೆ, ಈಗ ನೋಡಿದ್ರೆ ಅದೇನೂ ಮಾಡಿಲ್ವಲ್ಲ ಅಂತ ಅನಿಸೋಕೆ ಶುರುವಾಗುತ್ತೆ. ತೀರಾ ಲೇಟ್ ಆಗೋದ್ರೊಳಗೆ ಏನಾದ್ರೂ ಮಾಡಲೇಬೇಕು ಎಂದು ಮುಂದಾಗುತ್ತೇವೆ. ಇದಕ್ಕೆ Mid-Life Crisis ಎಂದು ಹೇಳಲಾಗುತ್ತದೆ. ಸಿಂಪಲ್ಲಾಗಿ ಹೇಳೊದಾದ್ರೆ ನಾಳೆ ಸಾಯುತ್ತೇನೆ ಎಂದು ತಿಳಿದ ಕ್ಯಾನ್ಸರ್ ಪೇಷಂಟ್ ಹೇಗೆ ಇರುವ ಸಮಯವನ್ನು ಸಂಪೂರ್ಣವಾಗಿ ತನ್ನ ಆಸೆಗಳನ್ನು  ಈಡೇರಿಸಿಕೊಳ್ಳುತ್ತಾನೋ ಹಾಗೆ, ಇರುವ ಸ್ವಲ್ಪ ಸಮಯದಲ್ಲಿಯೇ ಕಳೆದುಹೋಗಿರುವ ತನ್ನನ್ನು ತಾನು ಹುಡುಕುವ ಪ್ರಯತ್ನ ಸಮಸ್ಯೆಯ ಸುತ್ತ ಕಾಣಬಹುದು.

ಮುಂದಿನ ಕಾರ್ಯಕ್ರಮ ನನ್ನದಾ??


ಸಾಂದರ್ಭಿಕ ಚಿತ್ರ: ಸಾಕ್ಷಾತ್ಕಾರ
Stage fear  ಅನ್ನೋದು ಯಾರಿಗಾದರೂ ಇರಬಹುದಾದ ಸಾಮಾನ್ಯ ಗುಣ. ಸಣ್ಣವರಿದ್ದಾಗ ಅಮ್ಮ-ಅಪ್ಪ ಖುಷಿ ಆಗ್ತಾರೆ ಅಂತ ಡ್ಯಾನ್ಸ್ ಮಾಡೋಕೆ ಒಪ್ಪರ್ತೀವಿ. ಆದರೆ ಸ್ಟೇಜ್ ಹಿಂದೆ ನಿಂತು ಮುಂದಿನ dance slot ನಮ್ಮದೇ ಅಂತ ಗೊತ್ತಾದಾಗ ಹೃದಯದ ಮೂಲೆಯಲ್ಲಿ ಪುಕು ಪುಕು ಅನ್ನದೇ ಇರದು. Next project seminar, Next Interview ಹೀಗೆ ಹಲವು ಉದಾಹರಣೆಗಳಿವೆ. ಮುಂದೊನ slot ನಮ್ಮದೇ ಅಂತ ತಿಳಿದಾಗ ಒಂದು ರೀತಿಯ ಭಯ ಕಾಡುತ್ತೆ. ಮೂರನೇ ಸಮಸ್ಯೆ ಕಾಡುವುದು 60 ವರ್ಷ ಸುಮಾರಿನ ವಯಸ್ಸಾದಾಗ (ಅಲ್ಲಿಯವರೆಗೆ ಬದುಕಿದ್ರೆ). Laughter Club ಅಲ್ಲಿ ಹ್ಹ ಹ್ಹ ಹ್ಹಾ ಅಂತ ನಕ್ಕಿದ ಮೇಲೆ, ಒಂದು ಸಣ್ಣ ಕ್ಯಾಂಟೀನ್ ಹತ್ರ ಕುಳಿತು ಟೀ ಹೀರುವಾಗ ಒಂದು ಫೋನ್ ಬರುತ್ತೆ, ಸ್ಕೂಲಲ್ಲಿ ಜೊತೆಯಾಗಿದ್ದ ಗೆಳೆಯ ತೀರಿ ಹೋದನೆಂದು. ಅವನ ಸಾವು ಎಷ್ಟು ನೋವು ತರುತ್ತದೆಯೋ, ನಾಳೆಯ ಬಗ್ಗೆ ಅಷ್ಟೇ ಆತಂಕ ಮೂಡಿಸುತ್ತದೆ. ಅಯ್ಯೋ ಮುಂದಿನ ಬಾರಿ ಸಾಯೋದು ನಾನೇ ಆಗಬಹುದಲ್ವಾ? ನನ್ನ ಜೀವನ ನಾನು ಪೂರ್ತಿತಾಗಿ ಜೀವಿಸಿದ್ದೆನೇ? ಅನ್ನೋ ಪ್ರಶ್ನೆಗಳು ಮೂಡುತ್ತವೆ. ಕೆಲವರು ಲೈಫಲ್ಲಿ ನೋಡೋಕೆ ಮಾಡೋಕೆ ಏನೂ ಉಳಿದಿಲ್ಲ, ಮಲಗಿದ್ದಾಗ ಒಂದು ದಿನ ಶಾಂತವಾಗಿ ಪ್ರಾಣ ಹೋದರೆ ಸಾಕು ಎಂದು ನಿರೀಕ್ಷಿಸುತ್ತಾರೆ. ಇನ್ನು ಕೆಲವರು ಅಳಿದುಳಿದ ಆಸೆಗಳನ್ನು ಈಡೇರಿಸಿಕೊಳ್ಳಲು ಮುಂದಾಗುತ್ತಾರೆ. ಇದಾದ ನಂತರ ಏನಾಗುತ್ತೆ ಅಂತ ನನಗೂ ಗೊತ್ತಿಲ್ಲ. ಪ್ರಾಯಶಃ ಇದೇ ಜೀವನ ಅನಿಸುತ್ತೆ. ಮುಂದಿನ ಕ್ಷಣ ಏನಾಗುತ್ತೆ ಅಂತ ತಿಳಿದು ಹೋದ್ರೆ ಜೀವನದಲ್ಲಿ ರುಚಿಯೇ ಇಲ್ಲದಂತಾಗುತ್ತದೆ, ಅಲ್ಲವೇ?


ಬಾಟಮ್ ಲೈನ್: The Number 23 ಚಿತ್ರದ ಸಾಲುಗಳು ಬರಹಕ್ಕೆ ಒಂದು appropriate ending ಕೊಡುತ್ತದೆ ಎಂಬುದು ನನ್ನ ಭಾವನೆ

There's no such thing as destiny. There are only different choices. Some choices are easy, some aren't. Those are the really important ones, the ones that define us as people.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ