ಜನವರಿ 23, 2015

I ಚಿತ್ರದ ಹಿನ್ನೆಲೆಯಲ್ಲಿ ಒಂದು ಸಿನಿಮಾ ಅವಲೋಕನ

(ಇದು ಸಿನಿಮಾ ವಿಮರ್ಶೆಯಲ್ಲ, ಸಿನಿ ಅನಿಸಿಕೆ ಅಷ್ಟೇ. ಐ ಸಿನಿಮಾದ ಬಗ್ಗೆ ನನ್ನ ಅನಿಸಿಕೆಯನ್ನು ಇಲ್ಲಿ ದಾಖಲಿಸಿದ್ದೇನೆ. ಪರ ವಿರೋಧ ಅಭಿಪ್ರಾಯಗಳೇನೇ ಇದ್ದರೂ ಕಾಮೆಂಟ್ ಮಾಡಿ)

ಒಂದು ಕಾಲ ಇತ್ತು, ರಾಜ್ ಕುಮಾರ್ ಜಮಾನದ ಸಿನಿಮಾಗಳು ಅಂದ್ರೆ ಕಥೆಯಲ್ಲಿ, ಪಾತ್ರಧಾರಿಗಳ ಆಯ್ಕೆಯಲ್ಲಿ, ಹಾಡುಗಳಲ್ಲಿ ತಪ್ಪುಗಳು ಅಥವಾ ಎಡವಟ್ಟುಗಳು ಕಾಣುತ್ತಿದ್ದದ್ದು ತೀರಾ ವಿರಳ. ಪ್ರಾಯಶಃ ಆಗಿನ ನಟರೆಲ್ಲರೂ ರಂಗಭೂಮಿಯಿಂದ ಬಂದವರು ಎಂಬುದೂ ಕೂಡ ಕಾರಣವೆನಿಸುತ್ತೆ. ಆಗಿನ ಜನರು ಕೂಡ ಹಾಗೆಯೇ ಸಿನಿಮಾಗಳ ಬಗ್ಗೆ ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು. ಗಡಿನಾಡ ನೆಂಟರು ಹಬ್ಬ, ತೇರು ಅಂತ ಬಂದಾಗ ಬೇರೆ ಭಾಷೆ ಮಾತನಾಡೋದು ಕಂಡರೆ ಸಾಕು, "ಏನ್ರೀ ಇವ್ರು, ಯಾವ್ ಯಾವ್ದೋ ಹೊಸ ಭಾಷೆ ಕಲಿತಿದ್ದಾರೆ!" ಅಂತ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದರು.

ಕಟ್ ಮಾಡಿದ್ರೆ 2014. ಮಂಡ್ಯ ಹೈಕ್ಳಿಗೆ ಟಾಮ್ ಕ್ರೂಸ್ ಗೊತ್ತು. ಆಂಧ್ರ ಹುಡುಗರಿಗೆ ಸುದೀಪ್ ಅಂದ್ರೆ ಪ್ರಾಣ, ಬಿಹಾರಿ ಹುಡುಗಿಯರು ಎನ್ರಿಕೀ ಹಾಡು ಗುನುಗುತ್ತಾರೆ, ಜಪಾನಿ ಪ್ರೇಕ್ಷಕರು ಉಪೇಂದ್ರನನ್ನು ಆರಾಧಿಸುತ್ತಾರೆ. ಇದೆಲ್ಲಾ ಜಾಗತೀಕರಣದ ಮಹಿಮೆ ಎಂದೇ ಹೇಳಬಹುದು. ಭಾಷೆಯ ಎಲ್ಲೆಯನ್ನು ಮೀರಿ ಸಿನಿಮಾ ಬೆಳೆದಿರುವುದೇ ಇದಕ್ಕೆ ಸಾಕ್ಷಿ.
ಐ ಸಿನಿಮಾದ ಕಥೆ ಹೇಳಿಕೊಳ್ಳುವಂಥ ಹೊಸದೇನಲ್ಲ. ಅವನು ಅವಳು ಪ್ರೀತಿಸಿ, ಅವರ ಪ್ರೀತಿಗೆ ಅಡ್ಡ ಬಂದವರನ್ನು ಅಡ್ಡಡ್ಡ ಮಲಗಿಸೋ ಕಥೆ ಎಷ್ಟೋ ವರ್ಷದಿಂದ ಎಲ್ರೂ ನೋಡ್ಕೊಂಡೇ ಬಂದಿರೋದು. ಮಹಾಭಾರತವು ಅದೇ ಆದರೂ ಕಥೆ ಹೇಳುವ ಶೈಲಿಯಿಂದ ನೋಡುಗರನ್ನು ಸೆಳೆಯಬಹುದು ಎಂದು ದೂರದರ್ಶನದಲ್ಲಿ ಪ್ರಸಾರವಾಗುತಿದ್ದ ಮಹಾಭಾರತ ಧಾರವಾಹಿ ತೋರಿಸಿಕೊಟ್ಟಿತ್ತು. ಅದಕ್ಕೆ ತಾಜಾ ಉದಾಹರಣೆ, ತೆಲುಗು ಚಿತ್ರ ಈಗ, ಶ್ರೀ ಮುರಳಿ ಅಭಿನಯದ ಉಗ್ರಂ ಮತ್ತು ವಿಕ್ರಮ್ ಅಭಿನಯದ ಐ. 
'ಐ' ಚಿತ್ರದಲ್ಲಿ ವಿಕ್ರಮ್ ಮತ್ತು ಏಮಿ ಜಾಕ್ಸನ್

ಎಲ್ಲೋ ಮಧ್ಯಮ ವರ್ಗದ ಅಪಾರ್ಟ್ ಮೆಂಟ್ ನಲ್ಲಿ ವಾಸಿಸುತ್ತಾ ತನ್ನದೇ ಜಿಮ್ ನೆಡೆಸಿಕೊಂಡು ಆರಾಮಾಗಿದ್ದವನ ಬದುಕಲ್ಲಿ ತನ್ನ ನೆಚ್ಚಿನ ಮಾಡೆಲ್ ನ ಪ್ರವೇಶವಾಗುತ್ತದೆ. ಇಬ್ಬರೂ ಪ್ರೀತಿಸುತ್ತಾರೆ. ಮುಂದಿನದನ್ನು ಮಾಮೂಲಿನಂತೆ ಊಹಿಸಬಹುದು. ಆದರೆ ಈ ಸಿನಿಮಾದಲ್ಲಿ ನನಗೆ ಮೆಚ್ಚುಗೆಯಾದ ಅಂಶಗಳು ಹಲವಾರಿವೆ. ಅಂದವೇ ಒಂದು ಊರು ಎಂದಾದರೆ, ಆ ಊರಿನ ರಾಜ, ಚಿತ್ರದ ನಾಯಕ ಲಿಂಗೇಶ. ಅವನಿಗೆ ತಕ್ಕ ರಾಣಿ ದಿಯಾ, ಚಿತ್ರದ ನಾಯಕಿ. ದಡ್ಡನಿಗೆ ದೊಣ್ಣೆ ಪೆಟ್ಟು ಎನ್ನುವ ಹಾಗೆ, ಸುಂದರನಿಗೆ ಕುರೂಪದ ಪೆಟ್ಟು ಎಂದು ಸೇರಿಸಲು ಅಡ್ಡಿಯಿಲ್ಲ ಎಂದು ಈ ಸಿನಿಮಾ ನೋಡಿದ ಮೇಲೆ ನಿಮಗನಿಸುತ್ತದೆ. ಅಜಾನುಬಾಹು body builder ನ ರೂಪದಲ್ಲಿ ಕಾಣುವ ನಾಯಕ ನಗಿಸಿದರೆ, hunchback ನ ತೆಳು ಶರೀರದಲ್ಲಿ ಕಾಡುತ್ತಾನೆ. ಒಬ್ಬ ನಟನಿಗಿರುವ ಈ ಮಟ್ಟದ dedication ಗೆ ಒಂದು ಸಲಾಂ. ಮಿಕ್ಕಂತೆ ಎ ಆರ್ ರೆಹಮಾನ್ ಸಂಗೀತ ಯಾವುದೋ ಕಾಣದ ಪ್ರದೇಶಕ್ಕೆ ಕರೆದುಕೊಂಡು ಹೋಗುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ ಸರಳವಾಗಿ ಹೇಳಬಹುದಾದ ಕಥೆಯನ್ನು ಅದ್ಭುತ ಕ್ಯಾನ್ವಾಸ್ ಪೇಂಟಿಂಗ್ ನಂತೆ ಚಿತ್ರಿಸಿದ್ದಾರೆ ನಿರ್ದೇಶಕ ಶಂಕರ್.

ಬಾಟಮ್ ಲೈನ್: ಆಪ್ತಮಿತ್ರ ಚಿತ್ರದ ಡೈಲಾಗ್ - Experience cannot be explained, ಅನುಭವನಾ ಅನುಭವಿಸಬೇಕು ಅಷ್ಟೇ.

ಜನವರಿ 15, 2015

Song of the Day

ಹಿಂಗೆ ಮಾಮೂಲಿ ದಿನದ ಹಾಗೆ ಎಲ್ಲೋ ಹೋಗ್ತಾ ಇರ್ತೀವಿ, ಹೋಟೆಲ್ ನ ಟೇಪ್ ರೆಕಾರ್ಡರ್ ನಲ್ಲಿ, ಇಲ್ಲಾಂದ್ರೆ ಆಟೋ ಪಕ್ಕದಲ್ಲಿ ಹೋಗ್ತಾ ಇರುವಾಗ ಒಂದು ಹಾಡು ಕೇಳುತ್ತೆ. ಆ ಹಾಡು ನಮ್ಮ ನಿಮ್ಮ ಫೋನಲ್ಲೂ ಇರುತ್ತೆ. ಆದರೆ ಕೇಳಿರಲ್ಲ ಅಷ್ಟೇ. ಅರೇ ಇಸ್ಕಿ, ಈ ಹಾಡು ತುಂಬಾ ಚೆನ್ನಾಗಿದೆಯಲ್ಲಾ ಅಂತ ಮನಸ್ಸಿಗೆ ಅನಿಸುತ್ತೆ. ಅಲ್ಲಿಗೆ, ಮುಗೀತು ಕಥೆ. ಟ್ರಾಫಿಕ್ ಸಿಗ್ನಲ್ ಬಂದ್ರೂ ಅದೇ ಹಾಡು ಕೇಳುತ್ತೆ, ಆಫೀಸಲ್ಲಿ ಬಾಸ್ ಬೈದ್ರೂ ಅದೇ ಹಾಡು ತಲೆಯಲ್ಲಿ ಗುನುಗುತ್ತೆ, ಎಗ್ಸಾಮ್ ಗೆ ಓದುತ್ತಿದ್ದರೂ ಅದೇ ಹಾಡು ಇಣುಕುತ್ತೆ. ನಮ್ ಹುಡುಗರ ಗುಂಪಲ್ಲಿ ಈ ಥರ ಆಗೋದನ್ನ 'Song of the Day' ಅಂತ ಕರೀತೀವಿ. ಈ ರೀತಿಯಾಗಿ ಇವತ್ತು ನನಗೆ ಕೇಳಿದ ಹಾಡು 'ಬೆಳ್ಳಿಕಾಲುಂಗುರ ಚಿತ್ರದ ಹಾಡು: ಒಂದೇ ಒಂದು ಕಣ್ಣ ಬಿಂದು'

ಸಾಂದರ್ಭಿಕ ಚಿತ್ರ (ಚಿತ್ರ ಕೃಪೆ: ಸಂತಬಂತ.ಕಾಮ್)

ಬರೀ ಮೆಲೋಡಿಯಸ್ ಹಾಡುಗಳು ಮಾತ್ರವಲ್ಲ, ಒಂದೊಂದು ಬಾರಿ ಮೈಕಲ್ ಜಾಕ್ಸನ್ ಹಾಡಿರುವ 'beat it' ಕಾಡುತ್ತೆ. ಇನ್ನೊಮ್ಮೆ ರಘು ದೀಕ್ಷಿತ್ ಗಾಯನದ 'ಗುಡುಗುಡಿಯ ಸೇದಿ ನೋಡೋ', ಇಲ್ಲವಾದರೆ ಜಂಗ್ಲಿ ಚಿತ್ರದ 'ನೀನೆಂದರೆ ನನ್ನೊಳಗೆ ಏನೋ ಒಂದು ಸಂಚಲನ', ಇನ್ಯಾವುದೋ ಸಲ ಇನ್ಯಾವುದೋ ಹಾಡು. ಒಟ್ನಲ್ಲಿ ಯಾವುದೂ ರೂಲ್ಸ್ ಇಲ್ಲ, ಇಂಥದೇ ಹಾಡು ಅಂತ, ಯಾವುದೋ ಒಂದು ಹಾಡು ನೆನಪಾಗುವುದು ಮಾತ್ರ ತಪ್ಪಲ್ಲ. ಬರೀ ಇಷ್ಟೇ ಆದ್ರೆ ಸರಿ ಬಿಡು ಅಂತ ಇಡೀ ದಿನ ಹಾಡು ಹೇಳ್ಕೊಂಡು ಆರಾಮಾಗಿರಬಹುದು. ಒಂದೊಂದು ಸಲ ಯಾವುದೋ ಹಾಡು ನೆನಪಾಗಿ ಯಾವ ಹಾಡು ಅನ್ನೋದೆ ಮರೆತು ಹೋಗುತ್ತೆ. ಅದನ್ನ ನೆನಪಿಸಿಕೊಳ್ಳುವ ಹೊತ್ತಿಗೆ ಅರ್ಧ ದಿನ ಆಗಿ ಹೋಗಿರುತ್ತೆ. ಇನ್ನೂ ಕೆಲವು ಸಲ ಇನ್ನೂ ಹಾಸ್ಯಾಸ್ಪದ ಅನ್ನಿಸೋ ಕೆಲಸ ಆಗಿ ಹೋಗುತ್ತೆ. ಹಾಡು ನೆನಪಾಗುತ್ತೆ, ಆದ್ರೆ ಯಾವ ಸಿನಿಮಾ/ಆಲ್ಬಂ ಅಂತ ನೆನಪಾಗೋದೇ ಇಲ್ಲ. ನಮ್ ಹುಡುಗ್ರಿಗಾದ್ರೂ ಕೇಳೋಣ ಅಂದ್ರೆ, ಹಾಡು ಹೇಳೋಣ ಅಂತ ಬಾಯಿ ತೆಗೆಯೋದೇ ತಡ ನಮ್ಮ ಕೋಗಿಲೆ ಕಂಠ ಕೇಳಲಾರದೇ "ಅಣ್ಣತಮ್ಮ, ಫೋನ್ ಬಂತು" ಅಂತ ಓಡಿ ಹೋಗ್ತಾರೆ. ಪುಣ್ಯ ಮಾಡಿದ್ರೆ ಆ ಪ್ರಶ್ನೆಗೆ ಒಂದು ದಿನ ಉತ್ತರ ಸಿಗುತ್ತೆ. ಇಲ್ಲಾಂದ್ರೆ ಏನೂ ಯೋಚಿಸಬೇಕಾಗಿಲ್ಲ, ಅಷ್ಟೊತ್ತಿಗೆ ಇನ್ನೊಂದು Song of the Day ತಲೆಯನ್ನೂ ಹೊಕ್ಕಿರುತ್ತದೆ. 

ಚಿಂತೆಯಲ್ಲೇ ಕಾಲ ಕಳೆಯಲು ತೀರಾ ಚಿಕ್ಕ ಬದುಕು ನಮ್ಮದು ಅಲ್ಲವೇ??!! So, Chill ಮಾಡಿ, ಇನ್ನೊಂದು ಹಾಡು ಕೇಳಿ.
ಅಂದ ಹಾಗೆ, ನಿಮ್ಮ Song of the Day ಯಾವುದು???

ಜನವರಿ 11, 2015

ರಾಜಧಾನಿ ಬದುಕು

Garden City Bangalore ಎಂದು ಕರೆಸಿಕೊಳ್ಳುತ್ತಿದ್ದ ನಮ್ಮ ಬೆಂದ ಕಾಳೂರು aka Bengaluru, ಕೆಲವು ಕಾಲ ಸಿಲಿಕಾನ್ ಸಿಟಿ ಎಂದೂ, ಮಂಡೂರು ಸುತ್ತಮುತ್ತ ಕಸ ವಿಲೇವಾರಿಯ ಸಮಸ್ಯೆ ಎದುರಾಗ Garbage City ಎಂದೂ, ಹೆಣ್ಣು ಮಕ್ಕಳ ಮೇಲೆ ಲೈಂಗಿಕ ಅತ್ಯಾಚಾರದ ಪ್ರಕರಣಗಳ ನಂತರ Rape City ಎಂದೂ, ಮತ್ತು ಇತ್ತೀಚೆಗೆ ಚರ್ಚ್ ಸ್ಟ್ರೀಟ್ ನ ಬಳಿ ನೆಡೆದ ಬಾಂಬ್ ಸ್ಫೋಟದ ನಂತರ Not a Safe City ಎಂದೂ ಖ್ಯಾತಿ ಪಡೆದಿದೆ. ಯಾರ್ ಏನೇ ಹೇಳ್ರಪ್ಪಾ, ನಮ್ಮೂರು ಬೆಂಗಳೂರು. Practically ಯೋಚನೆ ಮಾಡಿದ್ರೆ, ಬೆಂಗಳೂರಿನಲ್ಲಿರುವ ಯಾರೂ ಬೆಂಗಳೂರಿನವರಲ್ಲ, ನಾನೂ ಕೂಡ. ಅದಿಕ್ಕೆ ತಾನೇ, weekend holidays ಅಂತ ಎಲ್ರೂ ಬಸ್, ರೈಲು ಹತ್ಕೊಂಡು ತಮ್ಮೂರಿಗೆ ಹೋಗೋದು! ಇಂತಿಪ್ಪ ಸಂದರ್ಭದಲ್ಲಿ ಬೆಂಗಳೂರು ನಮ್ಮೂರು ಹೆಂಗಾಗುತ್ತೆ?


ಸಾಂದರ್ಭಿಕ ಚಿತ್ರ (ಕೃಪೆ: ಸುಲೇಖಾ.ಕಾಮ್)

ನನ್ನ ಪ್ರಕಾರ ಬೆಂಗಳೂರು ಅವಕಾಶಗಳ ನಗರ, a land of million opportunities. ಕಡ್ಲೆಕಾಯಿ ಮಾರೋನು ಕೂಡ ಎಷ್ಟೆಷ್ಟೋ ಸಂಪಾದಿಸಬಹುದು, ಕಷ್ಟ ಪಟ್ಟು ದುಡಿಯಬೇಕು ಅಷ್ಟೇ. ಗ್ಯಾಪಲ್ಲಿ ತಮ್ಮ ಬೇಳೆ ಬೇಯಿಸ್ಕೊಂಡು, ನಿಮ್ಮನ್ನು ಹಳ್ಳಕ್ಕೆ ತಳ್ಳುವ ಅವಕಾಶವಾದಿಗಳೂ ಕೂಡ ಇದ್ದಾರೆ, ನೆನಪಿರಲಿ. ಅಯ್ಯೋ, ಮ್ಯಾಟ್ರು ಎಲ್ಲೆಲ್ಲೋ ಹೋಗ್ತಿದೆ. ಎಲ್ಲಿದ್ದೆ ನಾನು? ಹಾ! ಬೆಂಗಳೂರು ಅವಕಾಶಗಳ ನಗರ. ಪ್ರತಿ ವರ್ಷ ಮಂಗಳೂರು, ಮಂಡ್ಯ, ಮೈಸೂರು, ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ಕಲಬುರ್ಗಿ (ಹಿಂದಿನ ಗುಲಬರ್ಗಾ), ಬೀದರ್, ಕೋಲಾರ, ಅಲ್ಲದೇ ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು, ತೈವಾನ್, ಭೂತಾನ್, ಕೆನಡಾ ಹೀಗೆ ಎಲ್ಲಿಂದಲೋ ಉದ್ಯೋಗ ಅರಸಿ ಜನರು ಬೆಂಗಳೂರಿಗೆ ಬರುತ್ತಾರೆ. ಪ್ರತಿಯೊಬ್ಬ ಹುಡುಗ ತನ್ನ ಬಾಳಿನಲ್ಲಿ ಪ್ರೀತಿಯ ತಾಯಿ, ಪ್ರೀತಿಸಿದ ಹುಡುಗಿ, ಈ ಇಬ್ನರನ್ನು ಎಂದಿಗೂ ಮರೆಯಿವುದಿಲ್ಲ. ಬೆಂಗಳೂರು ನಗರವೂ ಹಾಗೆಯೇ. ತಾಯಿಯ ಹಾಗೆ ಆಸರೆ ನೀಡುತ್ತಾಳೆ, ಒಲವಿನ ಗೆಳತಿಯ ಹಾಗೆ depress ಆದಾಗ cheer up ಮಾಡುತ್ತಾಳೆ. ಅದಕ್ಕೆ ಅನಿಸುತ್ತೆ, ಇಲ್ಲಿಂದ ಯಾರಾದರೂ ಬೇರೆ ಊರಿಗೆ ಹೋದಾಗ, "ಯಾವ್ ಊರು ಸ್ವಾಮಿ ನಿಮ್ದು?" ಅಂದಾಗ "ನಮ್ಮೂರು ಬೆಂಗಳೂರು ಸ್ವಾಮಿ!" ಅನ್ನೋದು. ಅಂಥ ಅಪ್ರತಿಮ ನಗರವಿದು.

ಎಲ್ಲಿಂದಲೋ ಬಂದು ಈ ಊರಿನ ಬಣ್ಣಗಳಲ್ಲಿ ಬೆರೆತು ಹೋದವರೆಷ್ಟೋ, ಈ ನಗರದ ಹವಾಮಾನಕ್ಕೆ ಮಾರು ಹೋದವರೆಷ್ಟೋ! ಅವರಲ್ಲಿ ನಾನು ಕೂಡ ಒಬ್ಬ. ಅದಕ್ಕೆ  ಆಗ ಹೇಳಿದ್ದು, ನಮ್ಮೂರು ಬೆಂಗಳೂರು ಅಂತ. ಅಂದ ಹಾಗೆ, ಒಂದು ವಿಷಯ ಕೇಳೋದು ಮರೆತೇ ಹೋಗಿತ್ತು,
"ಯಾವ್ ಊರು ಸ್ವಾಮಿ ನಿಮ್ದು?"